ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಪದ್ಮಶ್ರೀ ತುಳಸೀಗೌಡ ಚಾಲನೆ
ಮೈಸೂರು, ಮಾರ್ಚ್ 13: ಮೈಸೂರಿನ ರಂಗಾಯಣದ ಅಂಗಳ ಎಂದಿನಂತೆ ಇರಲಿಲ್ಲ, ಕೊರೊನಾದಿಂದ ಹೊರಗೆಲ್ಲೂ ಹೋಗದೆ ಮನೆ ಸೇರಿದ್ದ ರಂಗ ಪ್ರೇಕ್ಷಕರು ಶನಿವಾರ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಸಾಕ್ಷಿಯಾದರು. ಪದ್ಮಶ್ರೀ ಪುರಸ್ಕೃತೆ, ವೃಕ್ಷಮಾತೆ ತುಳಸೀಗೌಡ ಮತ್ತು ನಟಿ ಮಾಳವಿಕ ಅವಿನಾಶ್ ಮುದ್ದಾದ ಮಗುವಿದ್ದ ತೊಟ್ಟಿಲು ತೂಗುವ ಮೂಲಕ ಬಹುರೂಪಿ ರಾಷ್ಟ್ರೀಯ ರಂಗೋತ್ಸವವನ್ನು ಉದ್ಘಾಟಿಸಿದರು.
ರಾಷ್ಟ್ರೀಯ ರಂಗೋತ್ಸವ ಉದ್ಘಾನೆ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, 'ತಾಯಿ' ಶೀರ್ಷಿಕೆಯಲ್ಲಿ ಹಮ್ಮಿಕೊಂಡಿರುವ ಬಹುರೂಪಿ ರಂಗೋತ್ಸವ ಬಹಳ ಉತ್ತಮವಾಗಿದೆ. 10 ದಿನಗಳ ಕಾಲ ನಾನಾ ನಾಟಕಗಳು, ಕಲಾ ಪ್ರದರ್ಶನ ವೀಕ್ಷಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಉಕ್ರೇನ್‌ನಲ್ಲಿ ಸಿಲುಕಿದ್ದ ತಮ್ಮ ಮಕ್ಕಳು ತಾಯ್ನಾಡಿಗೆ ಮರಳಿದಾಗ ಆ ತಾಯಂದಿರ ಸಂತೋಷಕ್ಕೆ ಪಾರವೇ ಇರಲಿಲ್ಲ. ತಾಯಿಗೆ ಇರುವ ಶಕ್ತಿಯನ್ನು ವರ್ಣಿಸಲು ಅಸಾಧ್ಯ. ತಾಯಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ರಂಗೋತ್ಸವ ಕಾರ್ಯಕ್ರಮದ ಬಗ್ಗೆ ಎಷ್ಟು ಹೇಳಿದರು ಸಾಲದು ಎಂದು ಎಸ್.ಟಿ. ಸೋಮಶೇಖರ್ ಬಣ್ಣಿಸಿದರು.

ಇದಕ್ಕೂ ಮುನ್ನ ಕರಕುಶಲ ಮೇಳಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು. ಮೇಯರ್ ಸುನಂದಾ ಪಾಲನೇತ್ರ, ಶಾಸಕ ಎಲ್. ನಾಗೇಂದ್ರ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅಪ್ಪಣ್ಣ, ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ. ಫಣೀಶ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ, ಕಾಡಾ ಅಧ್ಯಕ್ಷ ಶಿವಲಿಂಗಯ್ಯ, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಂಗಾಯಣ ಹಿರಿಯ ಕಲಾವಿದ ರಾಮಚಂದ್ರ ಹಡಪದ ಮತ್ತು ತಂಡದಿಂದ ಪ್ರಾರ್ಥನೆ ನೆರವೇರಿಸಲಾಯಿತು. ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಡಾ.ಎನ್. ಮಮತಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಬಹುರೂಪಿ ಬುಲೆಟಿನ್ ಹಾಗೂ ಬಹುರೂಪಿ ಕಿರುಪುಸ್ತಿಕೆಯನ್ನು ಇದೇ ವೇದಿಕೆಯಲ್ಲಿ ಅನಾವರಣಗೊಳಿಸಲಾಯಿತು.












Click it and Unblock the Notifications