ಯುಗಾದಿ ಹಬ್ಬಕ್ಕೆ ಮೈಸೂರು ರೇಷ್ಮೆ ಸೀರೆಗಳ ಹಬ್ಬವೋ ಹಬ್ಬ
ಚಾಮರಾಜನಗರ, ಮಾರ್ಚ್ 5: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ವತಿಯಿಂದ ನಗರದಲ್ಲಿ ಮಾರ್ಚ್ 4ರಿಂದ 7ರವರೆಗೆ ಹಮ್ಮಿಕೊಳ್ಳಲಾಗಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಇಂದು ಚಾಲನೆ ದೊರೆಯಿತು.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿರುವ 4 ದಿನಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಕಾರ್ಯಕ್ರಮದಲ್ಲಿ ಜತೆಯಾದರು.
106 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಯುಗಾದಿ ಹಬ್ಬ ಸನ್ನಿಹಿತವಾಗುತ್ತಿರುವುದರಿಂದ ಮೈಸೂರು ರೇಷ್ಮೆ ಸೀರೆ ಪ್ರಿಯರಿಗೆಂದೇ ಈ ವಿಶೇಷ ಪ್ರದರ್ಶನ, ಮಾರಾಟ ಮೇಳವನ್ನು ಆಯೋಜಿಸಿದೆ. ಈಗಾಗಲೇ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಾರಾಟ ಮೇಳಗಳನ್ನು ನಡೆಸಲಾಗಿದೆ.

1000ಕ್ಕೂ ಹೆಚ್ಚಿನ ಸಂಗ್ರಹ
ಜಾನಪದ ನಗರಿಯಲ್ಲಿ ನಡೆಯುತ್ತಿರುವ ಈ ಸೀರೆಗಳ ಹಬ್ಬದಲ್ಲಿ ಸಾವಿರಕ್ಕೂ ಹೆಚ್ಚಿನ ತರಹೇವಾರಿ ನಾಜೂಕು ವಿನ್ಯಾಸದ ಮೈಸೂರು ರೇಷ್ಮೆ ಸೀರೆಗಳು ಲಭ್ಯವಿದೆ. ಝರಿ ಸೀರೆಗಳು, ಕ್ರೇಪ್ ಡಿ ಚೈನ್, ಜಾರ್ಜೆಟ್, ಡಿಜಿಟಲ್ ಹಾಗೂ ಸಾದಾ ಮುದ್ರಿತ ರೀತಿಯ ಆಕರ್ಷಣೀಯ ಬಣ್ಣದ ಸೀರೆಗಳು ಪ್ರದರ್ಶನದಲ್ಲಿವೆ. ಜತೆಗೆ ನವನವೀನ ವಿವಾಹ ಸಂಗ್ರಹ ಸೀರೆಗಳನ್ನು ಪರಿಚಯಿಸಲಾಗಿದೆ. ಸೀರೆಗಳ ವೈಭವದ ಜತೆಗೆ ಮೈಸೂರು ರೇಷ್ಮೆಯಿಂದ ತಯಾರಿಸಲಾದ ಟೈ, ಸ್ಕಾರ್ಫ್ ಹಾಗೂ ಶರ್ಟ್ ಗಳು ಸಹ ಪ್ರದರ್ಶನದಲ್ಲಿದೆ.

ಶೇ.25ರವರೆಗೆ ರಿಯಾಯಿತಿ
ಈ ರೇಷ್ಮೆ ಸೀರೆಗಳ ಮೇಳದಲ್ಲಿ ಆರು ಸಾವಿರ ರೂಪಾಯಿಯಿಂದ ಆರಂಭಗೊಂಡು 75 ಸಾವಿರ ರೂ. ವರೆಗೂ ರೇಷ್ಮೆ ಸೀರೆಗಳನ್ನು ಮಾರಾಟಕ್ಕಿಡಲಾಗಿದೆ. ಇದರ ಜತೆಗೆ ಗ್ರಾಹಕರಿಗೆ ಅನುಕೂಲವಾಗಲೆಂದು ಸೀರೆಗಳ ಮೇಲೆ ಶೇ.25ರವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಮೈಸೂರು ರೇಷ್ಮೆ ಸೀರೆಯ ವಿಶೇಷತೆ
ಭಾರತದಲ್ಲಿ ದೊರೆಯುವ ಇತರ ರೇಷ್ಮೆ ವಸ್ತ್ರಗಳಿಗಿಂತ ಮೈಸೂರು ಸಿಲ್ಕ್ ವಿಭಿನ್ನವಾಗಿದ್ದು, ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲಾಗುತ್ತದೆ. ಇದು ಬಟ್ಟೆಗಳಿಗೆ ವಿಶೇಷ ಹೊಳಪು ನೀಡುತ್ತದೆ. ಮೈಸೂರು ಸಿಲ್ಕ್ ಗೆ ಉಪಯೋಗಿಸುವ ರೇಷ್ಮೆಯು ಪರಿಶುದ್ಧವಾಗಿದ್ದು, ಝರಿಯನ್ನು ಪರಿಶುದ್ಧ ಚಿನ್ನ ಬಳಸಿ ತಯಾರಿಸಲಾಗುತ್ತದೆ. ಝರಿಗಳ ವಿನ್ಯಾಸದಲ್ಲಿ ಶೇ. 0.65ರಷ್ಟು ಚಿನ್ನ ಹಾಗೂ ಶೇ. 65ರಷ್ಟು ಬೆಳ್ಳಿಯನ್ನು ಬಳಸಿ ಮಾಡಲಾಗುತ್ತದೆ. ಸೀರೆಗಳಲ್ಲಿ ಝರಿಗಳು ಹೆಚ್ಚಿದಂತೆ ಸೀರೆ ಬೆಲೆಯೂ ಅಧಿಕವಾಗುತ್ತದೆ.

ಮೂರು ಬಾರಿ ಮುಖ್ಯಮಂತ್ರಿ ವಾರ್ಷಿಕ ರತ್ನ ಪ್ರಶಸ್ತಿ
ಈ ಎಲ್ಲಾ ವೈಶಿಷ್ಟತೆಯ ಕಾರಣದಿಂದ ಮೈಸೂರು ಸಿಲ್ಕ್ ಗೆ ಭೌಗೋಳಿಕ ಗುರುತಿನ ನೋಂದಣಿ ಸಹ ಲಭಿಸಿದೆ. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಮೈಸೂರು ಸಿಲ್ಕ್ ನ ಏಕೈಕ ಮಾಲೀಕತ್ವ ಹೊಂದಿದ್ದು, ನೂಲು ತೆಗೆಯುವುದರಿಂದ ನೇಯ್ಗೆವರೆಗೂ ಒಂದೇ ಸೂರಿನಡಿ ಎಲ್ಲಾ ಉತ್ಪಾದನಾ ಹಂತಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಇದರಿಂದ ಕರ್ನಾಟಕದ ಅತ್ಯುತ್ತಮ ಸಾರ್ವಜನಿಕ ವಲಯಗಳ ಉದ್ದಿಮೆಗಳಿಗೆ ನೀಡಲಾಗುವ ಮುಖ್ಯಮಂತ್ರಿ ವಾರ್ಷಿಕ ರತ್ನ ಪ್ರಶಸ್ತಿಯನ್ನು ಮೂರು ಬಾರಿ ತನ್ನದಾಗಿಸಿಕೊಂಡಿದೆ.
ಮೈಸೂರು ರೇಷ್ಮೆ ಪ್ರಿಯರಿಗೆ ಈ ಪ್ರದರ್ಶನ ಹಾಗೂ ಮಾರಾಟ ಮೇಳ ಹಬ್ಬವನ್ನುಂಟು ಮಾಡುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications