ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಅತ್ಯಾಚಾರ ಸಂತ್ರಸ್ತೆಯ ಸ್ನೇಹಿತ ಚೇತರಿಕೆ
ಮೈಸೂರು, ಮೇ 14:ಮೈಸೂರಿನ ಲಿಂಗಾಂಬುದಿ ಪಾಳ್ಯದ ಬಳಿ ನಡೆದ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಖಾಕಿ ಪಡೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ನಗರ ಹೊರವರ್ತುಲ ರಸ್ತೆಯ ಬಳಿ ಇರುವ ಎಲ್ಲಾ ಮದ್ಯದ ಮಾರಾಟ ಮಳಿಗೆಗಳ ಮೇಲೆ ತನಿಖೆ ಕೇಂದ್ರೀಕೃತಗೊಂಡಿದೆ.
ಡಿಸಿಪಿ ಮುತ್ತರಾಜ್, ಎಸಿಪಿ ನಾಯಕ್, ಕುವೆಂಪು ನಗರ ಠಾಣೆ ಇನ್ಸ್ಪೆಕ್ಟರ್ ಪ್ರಕರಣದ ತನಿಖೆ ನಡೆಸುತ್ತಿದ್ದು, ಮೊಬೈಲ್ ಟವರ್ ಸಿಗ್ನಲ್ ಇವುಗಳ ಜೊತೆ ಜೊತೆಗೆ ಇನ್ನಿತರ ಮೂಲಗಳನ್ನು ಕೇಂದ್ರೀಕರಿಸಿಕೊಂಡಿದ್ದಾರೆ. ಅದರಲ್ಲಿ ವರ್ತುಲ ರಸ್ತೆಯ ಆಸುಪಾಸಿನಲ್ಲಿಯೇ ಇರುವ ಬಾರ್ ಗಳಲ್ಲಿ ಇರುವ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಅತ್ಯಾಚಾರ ನಡೆಸಲು ಆರೋಪಿಗಳು ಬಾರೊಂದರಲ್ಲಿ ಮದ್ಯವನ್ನು ಖರೀದಿಸಿ ತಂದು ನಿರ್ಜನ ಪ್ರದೇಶದಲ್ಲಿ ಸೇವಿಸಿದರೆಂಬ ಶಂಕೆ ಮೇಲೆ ತನಿಖೆ ನಡೆಸುತ್ತಿರುವ ಪೊಲೀಸರು, ವಿವೇಕಾನಂದ ನಗರ, ಕುವೆಂಪುನಗರ ಹಾಗೂ ರೆಸ್ಟೊರೆಂಟ್ ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೊಬೈಲ್ ಟವರ್ ಸಿಗ್ನಲ್ ಆಧಾರದ ಮೇಲೆ ಘಟನಾ ಸ್ಥಳದಲ್ಲಿ ದಾಖಲಾಗಿರುವ ಮೊಬೈಲ್ ಸಂಖ್ಯೆಗಳನ್ನು ಆಧರಿಸಿ ಈಗಾಗಲೇ ಇನ್ನೂರಕ್ಕೂ ಹೆಚ್ಚು ಮಂದಿಯ ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಪೊಲೀಸರು ಹಂತ - ಹಂತವಾಗಿ ಸುಮಾರು 50 ಮಂದಿಯನ್ನು ಸಂಪರ್ಕಿಸಿ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಬಾಲಕೃಷ್ಣ ಅವರು ಪ್ರತಿದಿನ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಘಟನೆಯ ವೇಳೆ ತೀವ್ರ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಸ್ನೇಹಿತನಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತಲೆ, ಬೆನ್ನು ಭಾಗಕ್ಕೆ ಮನಸೋ ಇಚ್ಛೆ ಥಳಿಸಿ, ಕೆಳಕ್ಕೆ ಬಿದ್ದಾಗ ಬಲಗಾಲಿನ ಮೇಲೆ ಕಲ್ಲು ಎತ್ತಿ ಹಾಕಿ ತೀವ್ರವಾಗಿ ಗಾಯಗೊಳಿಸಲಾಗಿತ್ತು.
ಮೂಳೆ ಸಂಪೂರ್ಣವಾಗಿ ಮುರಿದಿದ್ದರಿಂದ ಕೆ.ಆರ್. ಆಸ್ಪತ್ರೆ ವೈದ್ಯರು ಆತನನ್ನು ಶಸ್ತ್ರಚಿಕಿತ್ಸೆಗೊಳಪಡಿಸಿದ್ದಾರೆ. ಇನ್ನು ವ್ಯಕ್ತಿಯ ಸಂಬಂಧಿಕರೋರ್ವರು ಪ್ರತಿಕ್ರಿಯಿಸಿ, ಚಿಕಿತ್ಸೆ ಬಳಿಕ ಈಗಷ್ಟೇ ಸ್ವಲ್ಪ ಮಾತನಾಡಲಾರಂಭಿಸಿದ್ದಾರೆ. ಘಟನೆ ಕುರಿತು ಏನನ್ನೂ ಹೇಳುತ್ತಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications