ಗೌರಿ ಗಣೇಶ ಹಬ್ಬದಂದು ಜಂಬೂಸವಾರಿಯ ರೂವಾರಿಗಳಿಗೆ ವಿಶೇಷ ಗಜಪೂಜೆ: ಏನಿದರ ವಿಶೇಷ?
ಮೈಸೂರು, ಸೆಪ್ಟೆಂಬರ್ 07: ಗೌರಿ ಗಣೇಶ ಹಬ್ಬದಂದು ಅರಮನೆಯಲ್ಲಿ ಬೀಡು ಬಿಟ್ಟಿರುವ ಗಜಪಡೆಗಳಿಗೆ ವಿಶೇಷ ಪೂಜೆ ಮತ್ತು ಸತ್ಕಾರ ನಡೆಸುವುದು ಪ್ರತಿವರ್ಷವೂ ನಡೆಯುತ್ತಿದ್ದು ಅದರಂತೆ ಈ ಬಾರಿಯೂ ನಡೆಯಲಿದ್ದು, ಇದಕ್ಕಾಗಿ ಗಜಪಡೆ ತಯಾರಾಗುತ್ತಿವೆ. ಹಬ್ಬದ ದಿನವಾದ ಶನಿವಾರ ಅರಮನೆ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ದಸರೆಯಲ್ಲಿ ಭಾಗವಹಿಸಲು ಕಾಡಿನಿಂದ ಆಗಮಿಸಿರುವ ಎಲ್ಲಾ ಆನೆಗಳಿಗೂ ಅರ್ಚಕ ಪ್ರಹ್ಲಾದರಾವ್ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಈ ಸಂದರ್ಭ ಅವುಗಳಿಗೆ ಪಂಚಫಲ, ಕೋಡುಬಳೆ, ಒಬ್ಬಟ್ಟು, ರವೆ ಉಂಡೆ, ಸಿಹಿಗಡುಬು, ಕರ್ಜಿಕಾಯಿ, ಲಾಡು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ಮೊದಲಾದ ಗಣೇಶನ ಇಷ್ಟದ ತಿನಿಸುಗಳನ್ನು ನೀಡುವ ಮೂಲಕ ಮುಂದಿನ ದಸರಾ ತಯಾರಿಯಲ್ಲಿ ಯಾವುದೇ ವಿಘ್ನಗಳಾಗದಂತೆ ವಿನಾಯಕನಲ್ಲಿ ಬೇಡಿಕೊಳ್ಳಲಾಗುತ್ತದೆ. ಇದೀಗ ದಸರಾ ತಾಲೀಮು ಜೋರಾಗಿ ನಡೆಯುತ್ತಿದ್ದು, ಎರಡು ತಂಡಗಳು ಜೊತೆಯಾಗಿ ತಾಲೀಮು ನಡೆಸುತ್ತಿವೆ.

ಇದೆಲ್ಲದರ ನಡುವೆ ಎರಡನೇ ತಂಡವಾಗಿ ಆಗಮಿಸಿರುವ ಸೇರಿದಂತೆ 14 ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಒಣ ತಾಲೀಮಿನ ಬಳಿಕ ಭಾರದ ತಾಲೀಮು ಆರಂಭವಾಗಿದೆ. ಈ ಮಧ್ಯೆ ಎರಡನೇ ತಂಡದ ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು, ಸುಗ್ರೀವ 5 ಸಾವಿರ ಕೆಜಿ ತೂಗುವ ಮೂಲಕ ಕ್ಯಾಪ್ಟನ್ ಅಭಿಮನ್ಯು ನಂತರ ಸುಗ್ರೀವನೇ ಬಲಶಾಲಿ ಆನೆಯಾಗಿದ್ದಾನೆ.
ಗಜಪಡೆಯಲ್ಲಿ ಸುಗ್ರೀವ ಬಲಾಢ್ಯ ಆನೆ
ನಗರದ ದೇವರಾಜ ಮೊಹಲ್ಲಾದ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರಕ್ಕೆ ಕರೆದೊಯ್ದು ತೂಕ ಪರೀಕ್ಷೆ ನಡೆಸಿದ್ದು ಈ ವೇಳೆ ಸುಗ್ರೀವ 5190 ಕೆಜಿ, ಮಹೇಂದ್ರ 4910 ಕೆಜಿ, ಪ್ರಶಾಂತ 4875 ಕೆಜಿ, ಹೆಣ್ಣಾನೆಗಳಲ್ಲಿ ದೊಡ್ಡಹರವೆಯ ಲಕ್ಷ್ಮಿ 3485 ಕೆಜಿ, ಹಿರಣ್ಯ 2930 ಕೆಜಿ ತೂಕ ಹೊಂದಿದೆ.

ಈ ವೇಳೆ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾತನಾಡಿ, ಎರಡನೇ ತಂಡದ ದಸರಾ ಗಜಪಡೆಗೆ ಇಂದು ತೂಕ ಪರೀಕ್ಷೆ ಮಾಡಲಾಗಿದೆ. ಗುರುವಾರವಷ್ಟೆ ಐದು ಆನೆಗಳು ಅರಮನೆ ಅವರಣಕ್ಕೆ ಬಂದಿವೆ. ಅಭಿಮನ್ಯುವಿನ ನಂತರ ಸುಗ್ರೀವ ಅತಿ ಹೆಚ್ಚು ತೂಕ ಹೊಂದಿದ್ದಾನೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ. ಆದರೆ, ಪ್ರಶಾಂತ ಆನೆಗೆ ಮಾತ್ರ ಭೇದಿ ಕಾಣಿಸಿಕೊಂಡಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರಲ್ಲದೆ. ಸೆ.15ರ ಬಳಿಕ ಮರದ ಅಂಬಾರಿ ಹೊರಿಸಿ ತಾಲಿಮು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಂಜನ್ ಆನೆಗೆ ಸದ್ಯಕ್ಕೀಗ ವಿಶ್ರಾಂತಿ
ಇನ್ನು ಗಜಪಯಣ ಮೂಲಕ ಮೊದಲ ತಂಡದಲ್ಲಿ ಆಗಮಿಸಿದ್ದ ಕಂಜನ್ ಅರಣ್ಯ ಭವನದಲ್ಲಿ ಲಾರಿಯಿಂದ ಕೆಳಗಿಳಿಯುವ ಸಂದರ್ಭ ಕಾಲಿಗೆ ಪೆಟ್ಟಾಗಿತ್ತು. ಈ ಹಿನ್ನೆಲೆ ನಡೆಯಲು ಕಷ್ಟಪಡುತ್ತಿದ್ದ ಕಂಜನ್ ಆನೆಯನ್ನು ತಾಲೀಮಿನಿಂದ ದೂರ ಇರಿಸಿ ವಿಶ್ರಾಂತಿ ನೀಡಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸಧ್ಯಕ್ಕೆ ಸ್ವಲ್ಪ ಚೇತರಿಸಿಕೊಂಡಿರುವ ಕಂಜನ್ ಆನೆ ಇನ್ನೂ ಕೆಲವು ದಿನ ತಾಲೀಮಿನಲ್ಲಿ ಭಾಗವಹಿಸುವುದಿಲ್ಲ ಎನ್ನಲಾಗಿದೆ. ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿರುವ 2ನೇ ತಂಡದಲ್ಲಿರುವ ಐದು ಆನೆಗಳ ಪೈಕಿ ದೊಡ್ಡ ಹರವೆ ಆನೆ ಶಿಬಿರದ ಲಕ್ಷ್ಮಿಗೆ ಮೊದಲ ದಸರಾವಾಗಿದೆ.
ಇದು ಸರ್ಕಲ್ ಆನೆಯಾಗಿದ್ದು, 2015ರಲ್ಲಿ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿತ್ತು. ಪ್ರಸ್ತುತ ಆನೆಯ ಆರೋಗ್ಯ ಉತ್ತಮವಾಗಿದ್ದು, ಯಾವುದೇ ಪಟಾಕಿ, ವಾಹನ ಶಬ್ದಕ್ಕೆ ಅಂಜುವುದಿಲ್ಲ. ಇದು ಮೊದಲ ಬಾರಿ ದಸರಾದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ದುಬಾರೆ ಆನೆ ಶಿಬಿರದ ಪ್ರಶಾಂತನಿಗೆ ಇದು 14ನೇ ದಸರಾ ಆದರೆ, ಮತ್ತಿಗೋಡು ಆನೆ ಶಿಬಿರದ ಮಹೇಂದ್ರನಿಗೆ ಇದು 3ನೇ ದಸರಾ. ದುಬಾರೆ ಆನೆ ಶಿಬಿರದ ಸುಗ್ರೀವನಿಗೂ ಇದು 3ನೇ ದಸರಾ. ರಾಮಪುರ ಶಿಬಿರದ ಹಿರಣ್ಯಾ 2ನೇ ಬಾರಿ ದಸರಾದಲ್ಲಿ ಭಾಗವಹಿಸುತ್ತಿದೆ. ಎಲ್ಲ ಆನೆಗಳಿಗೆ ಶನಿವಾರ ಗಜಪೂಜೆ ಮಾಡಲಾಗುತ್ತಿದೆ. ಇದಾದ ನಂತರ ತಾಲೀಮು ಕಠಿಣವಾಗುತ್ತಾ ಹೋಗಲಿದೆ.












Click it and Unblock the Notifications