Mysuru Dasara: ಅದ್ದೂರಿಯಾಗಿ ಮೈಸೂರು ದಸರಾ ಆಚರಣೆಗೆ ತಯಾರಿ ಆರಂಭ
ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ರಾಜ್ಯದ ಜನರು ಖುಷಿಯಿಂದ ಇದ್ದಾರೆ. ಆದ್ದರಿಂದ ವಿಶ್ವವಿಖ್ಯಾತ ನಾಡಹಬ್ಬ ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ. ದಸರಾ ಕಾರ್ಯಕ್ರಮಗಳು ಈ ಬಾರಿ ವಿಭಿನ್ನವಾಗಿರಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದಸರಾ ಆಚರಣೆ ಕುರಿತ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಹೈ ಪವರ್ ಕಮಿಟಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ದಸರಾ ಆಚರಣೆಗೆ ಅನುದಾನ, ಅನುದಾನ ಬಳಕೆಗೆ 4ಜಿ ವಿನಾಯಿತಿ ನೀಡುವ ಬಗ್ಗೆ ಹಾಗೂ ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ಚರ್ಚಿಸಲಾಗಿದೆ. ದಸರಾ ಆಚರಣೆಗೆ ಹೆಚ್ಚಿನ ಪ್ರಾಯೋಜಕತ್ವ ಪಡೆಯಲು ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.

ಅಕ್ಟೋಬರ್ 3 ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.15 ರಿಂದ 9.45 ಗಂಟೆಯೊಳಗೆ ದಸರಾ ಉದ್ಘಾಟನೆ ಮಾಡಲು ಯೋಜಿಸಲಾಗಿದೆ. ಈ ಬಾರಿ ದಸರಾ ಆಚರಣೆಗೆ ₹40 ಕೋಟಿವರೆಗೂ ಅನುದಾನ ಬಳಸಿಕೊಳ್ಳಲು ಅವಕಾಶ ಕಲ್ಪಿಸಲು ಸಿಎಂ ಅನುಮತಿ ನೀಡಿದ್ದಾರೆ. ಮೈಸೂರು ನಗರದ ಎಲ್ಲಾ ರಸ್ತೆಗಳನ್ನು ಪರಿಶೀಲಿಸಿ ಗುಂಡಿ ಮುಚ್ಚಿ, ಮರು ಡಾಂಬರೀಕರಣ ಮಾಡಲಾಗುವುದು ಎಂದರು.
ಪಾರದರ್ಶಕತೆ ಕಾಯ್ದುಕೊಳ್ಳಿ
ಸ್ತಬ್ಧ ಚಿತ್ರಗಳಲ್ಲಿ ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡುವ ಸ್ತಬ್ಧ ಚಿತ್ರಗಳು ಇರಬೇಕು. ಜೊತೆಗೆ ಸರ್ಕಾರದ ಒಂದು ವರ್ಷದ ಸಾಧನೆ ಕುರಿತ ಸ್ತಬ್ಧ ಚಿತ್ರ ಇರಬೇಕು. 21 ದಿನಗಳ ಕಾಲ ದೀಪಾಲಂಕಾರ ಇರಬೇಕು. ದೀಪಾಲಂಕಾರ ದಸರಾ ಆಚರನೆಗೆ ಮೆರುಗು ತರುತ್ತದೆ ಎಂದರು.
ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮಗಳಿಗೆ ಕಳೆದ ಎರಡು ವರ್ಷಗಳಲ್ಲಿನ ಕಾರ್ಯಕ್ರಮಗಳು ಹಾಗೂ ಕಲಾವಿದರೂ ಪುನರಾವರ್ತನೆಯಾಗದಂತೆ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಚಿವರು ತಿಳಿಸಿದರು.
ಚಿಣ್ಣರ ದಸರಾ, ಮಹಿಳಾ ದಸರಾ ಹಾಗೂ ರೈತ ದಸರಾ ಕಾರ್ಯಕ್ರಮ ಅರ್ಥ ಪೂರ್ಣವಾಗಿ ನಡೆಸಬೇಕು. ಸ್ವತಂತ್ರ ದೇಶಾಭಿಮಾನದ ಸಂದೇಶಗಳನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.
ದಸರಾ ಆಚರಣೆಯಲ್ಲಿ ಅಧಿಕಾರಿಗಳು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಆಹಾರ ಮೇಳವನ್ನು ಸ್ಕೌಟ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೇಸ್ ಆವರಣದಲ್ಲಿ ಆಯೋಜಿಸುವಂತೆ ಸೂಚನೆ ಕೊಟ್ಟರು.
ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ದಸರಾ ಆಚರಣೆಗೆ 19 ಉಪ ಸಮಿತಿಗಳನ್ನು ರಚಿಸಲಾಗಿದೆ. ಗಜ ಪಯಣವನ್ನು ಆಗಸ್ಟ್ 21 ರಂದು ನಿಗದಿ ಮಾಡಲಾಗಿದೆ. ಕರ್ನಾಟಕ ಸಂಭ್ರಮ 50 ಆಚರಣೆ ಮಾಡಲಾಗುತ್ತಿದೆ. ಇದರ ಲಾಂಛನವನ್ನು ದಸರಾ ಆಚರಣೆಯಲ್ಲಿ ಅಳವಡಿಸಲಾಗುವುದು ಎಂದು ಸಭೆಗೆ ಮಾಹಿತಿ ಕೊಟ್ಟರು.












Click it and Unblock the Notifications