ಅಮೃತ ಮಹೋತ್ಸವ ಸಂಭ್ರಮದಲ್ಲಿ ಮೈಸೂರಿನ ರೇಷ್ಮೆ ಮಂಡಳಿ: ಇಲ್ಲಿದೆ ಸಂಪೂರ್ಣ ವಿವರ
ಮೈಸೂರು, ಸೆಪ್ಟೆಂಬರ್ 19: ಮೈಸೂರು ಕೇಂದ್ರ ರೇಷ್ಮೆ ಮಂಡಳಿಯು 75 ವರ್ಷ ಪೂರೈಸಿದ್ದು, ಅಮೃತಮಹೋತ್ಸವದ ಸಂಭ್ರಮದಲ್ಲಿದೆ. ಈಗಾಗಲೇ ದೇಶವಿದೇಶದಲ್ಲಿ ಮೈಸೂರು ರೇಷ್ಮೆ ತನ್ನದೇ ಆದ ಖ್ಯಾತಿಯನ್ನು ಉಳಿಸಿಕೊಂಡಿದೆ. ಹೀಗಿರುವಾಗ ಇಲ್ಲಿ ಬೆಳೆಯುವ ರೇಷ್ಮೆಗೂ ಮಹತ್ವದ ಸ್ಥಾನವಿದೆ. ಇಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ ಸೀರೆ ಸೇರಿದಂತೆ ವಿವಿಧ ಪದಾರ್ಥಗಳ ತಯಾರಾಗುತ್ತಿದ್ದರೆ, ಇದಕ್ಕೆ ಇಲ್ಲಿನ ರೇಷ್ಮೆಯೇ ಕಾರಣವಾಗಿದ್ದು, ಇದು ಸಾಧ್ಯವಾಗಿರುವುದು ರೇಷ್ಮೆ ಮಂಡಳಿಯಿಂದಲೇ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ.
ಸುಮಾರು 75 ವರ್ಷಗಳ ಹಿಂದೆಯೇ ರೇಷ್ಮೆಯನ್ನು ಉತ್ತೇಜಿಸುವ ಸಲುವಾಗಿ ಮೈಸೂರಿನಲ್ಲಿ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಇವತ್ತು ಇದು ದೇಶದಾದ್ಯಂತ ಬೆಳೆದು ನಿಂತಿದೆ. ಬೇರೆ, ಬೇರೆ ರಾಜ್ಯಗಳಲ್ಲಿ ಬೆಳೆದು ನಿಂತಿದೆ. 1948ರಲ್ಲಿ ಆರಂಭಗೊಂಡ ಸಂಸ್ಥೆ 75 ವರ್ಷಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 159 ಘಟಕಗಳು ಮತ್ತು 9 ಸಂಶೋಧನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಉತ್ಪಾದನೆಯಾಗುತ್ತಿದ್ದು, ಪ್ರಸ್ತುತ ರೇಷ್ಮೆ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿರುವುದು ನಾವೆಲ್ಲರೂ ಹೆಮ್ಮೆಪಡುವಂತಾಗಿದೆ.

ರೇಷ್ಮೆ ಕೃಷಿ, ಉತ್ಪಾದನೆ ಕುರಿತಂತೆ ನೋಡುವುದಾದರೆ 2023-24ರಲ್ಲಿ ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಶೇ.42ರಷ್ಟು ಪಾಲು ಹೊಂದಿದೆ. 2023-24ರಲ್ಲಿ 2028 ಕೋಟಿ ಮೌಲ್ಯದ ರೇಷ್ಮೆ ರಫ್ತು ಮಾಡಲಾಗಿದೆ. 2.63 ಲಕ್ಷ ಎಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯಲಾಗುತ್ತಿದ್ದು, ಕಚ್ಚಾ ರೇಷ್ಮೆ ಪ್ರಮಾಣವೂ ಏರಿಕೆಯಾಗಿದೆ. 2047ರ ವೇಳೆಗೆ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ.
ಮೊದಲೆಲ್ಲ ಚೀನಾದಿಂದ ಕಚ್ಚಾ ರೇಷ್ಮೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೀಗ ದೇಶಿಯವಾಗಿ ರೇಷ್ಮೆ ಬೆಳೆಗೆ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಉತ್ತೇಜನ ನೀಡುತ್ತಿರುವುದರಿಂದ ಆಮದು ಪ್ರಮಾಣ ಇಳಿಕೆಯಾಗಿದೆ. 2022-23ನ್ನು ಹೊರತುಪಡಿಸಿದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಆಮದು ಮಾಡಿಕೊಂಡಿಲ್ಲ. ಭಾರತದಿಂದಲೇ ಸುಮಾರು 950 ಮೆಟ್ರಿಕ್ ಟನ್ ರೇಷ್ಮೆ ಗೂಡನ್ನು ರಫ್ತು ಮಾಡಿರುವುದು ವಿಶೇಷವಾಗಿದೆ.
ರೇಷ್ಮೆಯನ್ನು ಕೇವಲ ಬಟ್ಟೆ ತಯಾರಿಕೆಗೆ ಮಾತ್ರವಲ್ಲದೆ ಆಹಾರ, ಔಷಧ, ಸೌಂದರ್ಯ ವರ್ಧಕಗಳ ತಯಾರಿಕೆಗೂ ಬಳಕೆಯಾಗುತ್ತಿದೆ. ಹಿಪ್ಪುನೇರಳೆ ಎಲೆಗಳನ್ನು ಸಕ್ಕರೆ ಕಾಯಿಲೆಗೆ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಇದರಿಂದಾಗಿ ರೈತರಿಗೆ ಹೆಚ್ಚು ಲಾಭವಾಗುತ್ತದೆ. ರೇಷ್ಮೆ ಬೆಳೆಗಾರರಿಗೆ ಈ ನಿಟ್ಟಿನಲ್ಲಿ ಅಗತ್ಯ ತರಬೇತಿ ನೀಡಲಾಗುತ್ತಿದ್ದು, ರೇಷ್ಮೆ ಉಪ ಉತ್ಪನ್ನ ಮಾಡುವವರಿಗೆ ಸ್ಟಾರ್ಟ್ಅಪ್ ಆರಂಭಿಸಲು ಉತ್ತೇಜನ ನೀಡುತ್ತಿರುವುದು

ಅಮೃತ ಮಹೋತ್ಸವ ಕಾರ್ಯಕ್ರಮದ ವಿವರ
ವಾಣಿಜ್ಯ ಬೆಳೆಗಳ ಪೈಪೋಟಿ, ಕೃಷಿ ಪ್ರದೇಶ ಇಳಿಕೆ, ಯುವಕರ ಬದಲಾದ ಆಸಕ್ತಿಯಿಂದಾಗಿ ರೇಷ್ಮೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಇದರಲ್ಲಿ ರಿಯಲ್ ಎಸ್ಟೇಟ್ ಪಾತ್ರವೂ ಇದೆ. ಕೋವಿಡ್‌ನಿಂದಾಗಿಯೂ ರೇಷ್ಮೆ ಉತ್ಪಾದನೆ ಕುಂಠಿತವಾಗಿತ್ತು. ಕಳೆದ ಎರಡು ಮೂರು ವರ್ಷಗಳಿಂದ ಚೇತರಿಕೆಯಾಗಿದೆ ಎನ್ನುವುದು ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ. ಇವತ್ತಿನ ಪರಿಸ್ಥಿತಿಯಲ್ಲಿ ರೇಷ್ಮೆ ಬೆಳೆಯುವುದು ರೈತರಿಗೆ ಸುಲಭವಾಗಿ ಉಳಿದಿಲ್ಲ. ಮುಂದಿನ ದಿನಗಳಲ್ಲಿ ಸಂಸ್ಥೆಯು ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ಮೂಲಕ ಇನ್ನಷ್ಟು ಉತ್ಪಾದನೆಗೆ ಸಹಕಾರಿಯಾಗ ಬೇಕಾಗಿದೆ.
ಇದೀಗ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ 75 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸೆ.20ರಂದು ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ಅವರು, ಬೆಳಗ್ಗೆ 11 ಗಂಟೆಗೆ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದ್ದು, ಕೇಂದ್ರ ಭಾರಿ ಕೈಗಾರಿಕೆ, ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದಾಗಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ವಿದೇಶಾಂಗ ವ್ಯವಹಾರ, ಜವಳಿ ಖಾತೆ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟ, ರೈಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಉಪಸ್ಥಿತಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ ಭಾಗವಹಿಸುತ್ತಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications