ರೋಹಿಣಿ ಸಿಂಧೂರಿಯನ್ನು ತಲೆ ಮೇಲೆ ಕೂರಿಸಿಕೊಂಡವರು ಯಾರು? - ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ಕಿಡಿ
ರೋಹಿಣಿ ಸಿಂಧೂರಿ ಅವರನ್ನು ತಲೆ ಮೇಲೆ ಕೂರಿಸಿಕೊಂಡವರು ಯಾರು? ರೂಪ ಎತ್ತಿರುವ ನೈತಿಕ, ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಪತ್ರಕರ್ತರು ಸತ್ಯಶೋಧ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ಮೈಸೂರು, ಫೆಬ್ರವರಿ 20: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಡಬಲ್ ಇಂಜಿನ್ ಸರಕಾರದ ಕೊಡುಗೆ. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಸರ್ವಿಸ್ ರಸ್ತೆ ಮಾಡಿ ಬಳಿಕ ಟೋಲ್ ಸಂಗ್ರಹಿಸಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪಸಿಂಹ, ಹೆದ್ದಾರಿಯಲ್ಲಿ 2 ಪಥದ ಸರ್ವಿಸ್ ರಸ್ತೆ ಮಾಡಲಾಗಿದೆ. ಅದನ್ನು ಸಾರ್ವಜನಿಕರ ಸೇವೆಗೆ ನೀಡಿದ ಬಳಿಕವೇ ಟೋಲ್ ಸಂಗ್ರಹ ಮಾಡಲಾಗುತ್ತದೆ ಎಂದರು.
ಇನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಎಲ್ಲರಿಗೂ ಅನುಕೂಲ ಆಗಬೇಕು. ನಮಗೆ ಎಲ್ಲರ ಬಗ್ಗೆ ಕಾಳಜಿ ಇದೆ. ನಿಮಗೆ ಬಡವರ ಮೇಲೆ ಕಾಳಜಿ ಇದ್ದರೆ ನಿಮ್ಮ ಸರ್ಕಾರದ ಅಧಿಕಾರದಲ್ಲಿರುವಾಗ ನಿರ್ಮಾಣವಾದ ನಂಜನಗೂಡು ರಸ್ತೆಯಲ್ಲಿ ಸರ್ವಿಸ್ ರಸ್ತೆ ಯಾಕಿಲ್ಲ? ಯಾಕೆ ಟೋಲ್ ಸಂಗ್ರಹಿಸುತ್ತಿದ್ದೀರಿ? ಮೊದಲು ಬೆಂಗಳೂರು-ಕನಕಪುರ ರಸ್ತೆ ಪೂರ್ಣಗೊಳಿಸಿ ಬಳಿಕ ಬಿಜೆಪಿ ಟೀಕಿಸಿ ಎಂದು ತಿರುಗೇಟು ನೀಡಿದರು.

ಐಎಎಸ್, ಐಪಿಎಸ್ ಅಧಿಕಾರಗಳ ಮೇಲೆ ರಾಜ್ಯ ಸರ್ಕಾರಕ್ಕೆ ನಿಯಂತ್ರಣ ಇಲ್ಲ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಹೇಳಿಕೆ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ಹಾಸನದಲ್ಲಿ ಮಹಾಮಸ್ತಕಾಭಿಷೇಕ ಆದಾಗ ಯಾರ ಸರ್ಕಾರವಿತ್ತು? ರೋಹಿಣಿ ಸಿಂಧೂರಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎ.ಮಂಜು ಅವರೊಂದಿಗೆ ಬೀದಿ ರಂಪ ಆಗಿತ್ತು. ಮೈಸೂರಿನ ರಶ್ಮಿ ಮಹೇಶ್ ಮೇಲೆ ಹಲ್ಲೆ ಮಾಡಿದಾಗ, ಜಿಲ್ಲಾಧಿಕಾರಿ ಶಿಖಾ ಅವರನ್ನು ನಿಂದಿಸಿದಾಗ, ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ರಾಜ್ಯದಲ್ಲಿ ಅಧಿಕಾರಿಗಳ ಸ್ಥಿತಿ ಏನಾಗಿತ್ತು? ರೋಹಿಣಿ ಸಿಂಧೂರಿ ಅವರನ್ನು ತಲೆ ಮೇಲೆ ಕೂರಿಸಿಕೊಂಡವರು ಯಾರು? ರೂಪ ಎತ್ತಿರುವ ನೈತಿಕ, ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಪತ್ರಕರ್ತರು ಸತ್ಯಶೋಧ ಮಾಡಬೇಕು ಎಂದು ಹೇಳಿದರು.
ಇನ್ನು ರಾಜ್ಯ ಬಜೆಟ್ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿಗೆ ಹಿಂದೆಂದಿಗಿಂತಲೂ ಹೆಚ್ಚು ಅನುದಾನ ನೀಡಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮೈಸೂರಿಗೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮಂಜೂರು ಮಾಡಿದ್ದರು. ಸೆಂಟರ್ ಆರಂಭಕ್ಕೆ ಬಜೆಟ್‌ನಲ್ಲಿ 50 ಕೋಟಿ ರೂಪಾಯಿ ಪ್ರಾರಂಭಿಕ ಮೊತ್ತ ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಭೂಮಿ ಪೂಜೆ ಮಾಡಲಾಗುವುದು ಎಂದರು.

ಇನ್ನು ಸಿದ್ದರಾಮಯ್ಯ ಮೈಸೂರಿನವರೇ ಅದರೂ ಕೆ.ಆರ್. ಆಸ್ಪತ್ರೆಗೆ ಅನುದಾನ ನೀಡಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಆಸ್ಪತ್ರೆ ನವೀಕರಣಕ್ಕೆ 89 ಕೋಟಿ ರೂ.ನೀಡಿದೆ. ವಿಮಾನ ನಿಲ್ದಾಣ ವಿಸ್ತರಣೆಗೆ 319 ಕೋಟಿ ರೂ. ಮೀಸಲಿಟ್ಟಿದ್ದು, ಅದರಲ್ಲಿ 150 ಕೋಟಿ ರೂ.ಬಿಡುಗಡೆಯಾಗಿ ರೈತರಿಗೆ ನೀಡಲಾಗಿದೆ. ಐವಿಎಂ ಸೆಂಟರ್, ಟೌನ್‌ಶಿಪ್ ನಿರ್ಮಾಣ ಮಾಡಲಾಗುತ್ತಿದೆ. ವರ್ಷದ 365 ದಿನವೂ ವಸ್ತುಪ್ರದರ್ಶನ ನಡೆಸಲು ಯೋಜನೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ. ಫಿಲ್ಮ್‌ಸಿಟಿ ನಿರ್ಮಾಣಕ್ಕೂ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಶೀಘ್ರದಲ್ಲೇ ಘೋಷಣೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಹಾಗೂ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಉಪಸ್ಥಿತರಿದ್ದರು.












Click it and Unblock the Notifications