ಜುಬಿಲಿಯಂಟ್ ಪ್ರಕರಣಕ್ಕೆ 3 ಕಾರಣ ಕೊಟ್ಟ ಸಚಿವ ಸೋಮಶೇಖರ್
ಮೈಸೂರು, ಮೇ 7: ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಯ ನೌಕರರಿಗೆ ಕೊರೊನಾ ವೈರಸ್ ಸೋಂಕು ತಗುಲಿದ ವಿಚಾರಕ್ಕೆ ಸಂಬಂಧಿಸಿದಂತೆ 3 ಕಾರಣ ಇದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಜಯಚಾಮರಾಜೆಂದ್ರ ಮೃಗಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಂಗಳೂರಿನಲ್ಲಿ ತಬ್ಲಿಘಿಗಳ ಸಭೆ ನಡೆದಿತ್ತು. ಆ ಸಭೆಗೆ ಜುಬಿಲಿಯಂಟ್ ಕಾರ್ಖಾನೆಯ ಕಾರ್ಮಿಕ ಹೋಗಿ ಬಂದಿದ್ದ ಎಂಬುದು ಮೊದಲ ಕಾರಣವೆಂದು ಗುರುತಿಸಲಾಗಿದೆ" ಎಂದು ಇನ್ನಷ್ಟು ಮಾಹಿತಿ ನೀಡಿದರು...

ಮೂರು ಕಾರಣಗಳಲ್ಲಿ ಒಂದರಿಂದ ಸೋಂಕು
ಕಾರ್ಖಾನೆಯ ಆಡಿಟ್‌ಗಾಗಿ ದೇಶದ ನಾನಾ ರಾಜ್ಯದ ಕೆಲವರು ಜುಬಿಲಿಯಂಟ್ ಕಾರ್ಖಾನೆಗೆ ಬಂದಿದ್ದು ಎರಡನೇ ಕಾರಣವಾಗಿದೆ. ಇನ್ನು ಜುಬಿಲಿಯಂಟ್ ಕಾರ್ಖಾನೆಯ ಅಧಿಕಾರಿಗಳು ದೇಶದ ಬೇರೆ ಬೇರೆ ಭಾಗಕ್ಕೆ ಹೋಗಿ ಬಂದಿದ್ದಾರೆ ಎಂಬುದು ಮೂರನೇ ಕಾರಣವಾಗಿದೆ ಎಂದು ತನಿಖಾ ತಂಡದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮೇಲಿನ ಮೂರು ಕಾರಣಗಳಲ್ಲಿ ಯಾವುದೋ ಒಂದು ಕಾರಣದಿಂದ ಕೊರೊನಾ ಸೋಂಕು ಹರಡಿರಬಹುದು ಎಂದು ಪೊಲೀಸರ ತನಿಖಾ ವರದಿಯಲ್ಲಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ ಎಂದರು.

ತನಿಖಾ ವರದಿ ಒಂದು ತಿಂಗಳು ತಡ
ಕೋವಿಡ್ ವಿಶೇಷ ತನಿಖಾಧಿಕಾರಿ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರ ತನಿಖಾ ವರದಿ ಇನ್ನು ನನ್ನ ಕೈ ಸೇರಿಲ್ಲವೆಂದರು. ಆದರೆ, ಅವರು ತನಿಖೆಗೆ 1 ತಿಂಗಳು ತಡವಾಗುತ್ತದೆ ಎಂದು ಹೇಳಿದ ಮಾಹಿತಿ ಬಂದಿದೆ ಎಂದು ತಿಳಿಸಿದ ಸಚಿವರು, ಶಾಸಕ ಹರ್ಷವರ್ಧನ್ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಸಕರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಪ್ರಾಣವನ್ನು ಉಳಿಸಿದ್ದಾರೆ. ಅವರಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದರು.

ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮೈಸೂರನ್ನು ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಬದಲಾಯಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ. ಕ್ವಾರೆಂಟೈನ್ ಸಂಖ್ಯೆಯೂ ಸಂಪೂರ್ಣ ಇಳಿದಿದೆ ಎಂದು ಎಸ್.ಟಿ ಸೋಮಶೇಖರ್ ಹೇಳಿದರು.
90 ಪಾಸಿಟಿವ್ ಪ್ರಕರಣದಿಂದ ಈಗ 7 ಕ್ಕೆ ಬಂದಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರೈತರಿಗೆ ಓಡಾಟಕ್ಕೆ ಅನುಕೂಲವಾಗಲಿ ಎಂದು ಗಡಿಭಾಗವನ್ನು ಓಡಾಟಕ್ಕೆ ಸ್ವಲ್ಪ ಸಡಿಲಗೊಳಿಸಲಾಗಿದೆ. ರೈತರು ಬೆಳೆದ ಬೆಳೆ ಮಾರಾಟಕ್ಕೆ ತೊಂದರೆಯಾಗುತ್ತಿದೆ.

ಆರ್ಥಿಕ ತಂದರೆಯಲ್ಲೂ ವಿಶೇಷ ಪ್ಯಾಕೇಜ್
ಹೀಗಾಗಿ ಹೂವು, ತರಕಾರಿ ಹಾಗೂ ಇನ್ನಿತರ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಗಡಿಭಾಗದಲ್ಲಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ಇನ್ನು ಕೆಲವು ಕಡೆಗಳಲ್ಲಿ ಯಾವುದಕ್ಕೆ ಅವಕಾಶ ಕೊಡಬೇಕು ಎಂಬುದು ಇಂದು ನಿರ್ಧಾರವಾಗಲಿದೆ ಎಂದು ತಿಳಿಸಿದರು. ಹಣಕಾಸು ತೊಂದರೆ ಇದ್ದರೂ ಕೂಡಾ ಮುಖ್ಯಮಂತ್ರಿಗಳು ಸಾವಿರದ ಆರುನೂರು ಹತ್ತು ಕೋಟಿ ರುಪಾಯಿಯ ಪ್ಯಾಕೇಜ್ ನೀಡಿದ್ದಾರೆ. ದೇವಸ್ಥಾನದ ಹಣವನ್ನು ಬಳಸಿಕೊಳ್ಳುವ ಚಿಂತನೆಯನ್ನು ಸದ್ಯಕ್ಕೆ ಮಾಡಿಲ್ಲ ಎಂದು ತಿಳಿಸಿದರು.