ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 'ಲೋಕೇಶ್ ನೆನಪು'
ಮೈಸೂರು, ಮೇ 17: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೇ.19 ರಂದು ನಟ ಲೋಕೇಶ್ 73 ನೇ ಜನ್ಮ ದಿನದ ಅಂಗವಾಗಿ 'ಲೋಕೇಶ್ ನೆನಪು' ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ತಿಳಿಸಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ನಟನ ರಂಗಶಾಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮವನ್ನು ಕಳೆದ 16 ವರ್ಷದಿಂದ 'ಲೋಕೇಶ್ ನೆನಪು' ಹೆಸರಿನಲ್ಲಿ ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ಮೈಸೂರಿನಲ್ಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗತಜ್ಞ, ವೃತ್ತಿ ರಂಗಭೂಮಿಯ ಚಿಂದೋಡಿ ಬಂಗಾರೇಶ್ ಅವರಿಗೆ ಸುಬ್ಬಯ್ಯ ನಾಯ್ಡು ಪ್ರಶಸ್ತಿ, ಚಲನಚಿತ್ರ ಕಲಾವಿದೆ ಶೈಲಶ್ರೀ ಅವರಿಗೆ ಲಕ್ಷ್ಮೀಬಾಯಿ ಪ್ರಶಸ್ತಿ, ಚಿತ್ರನಟ ರಮೇಶ್ ಭಟ್ ರವರಿಗೆ ಲೋಕೇಶ್ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮೈಸೂರಿನ ಕಲಾವಿದರಾದ ರಾಜಶೇಖರ ಕದಂಬ ಮತ್ತು ಶಂಕರ್ ಅಶ್ವಥ್ ಅವರನ್ನು ಗೌರವಿಸಲಾಗುವುದು. ಅಲ್ಲದೇ, ಮಂಡ್ಯ ರಮೇಶ್ ನಿರ್ದೇಶನದ 'ಶೂದ್ರಕನ ಮೃಚ್ಛಕಟಿಕ' ನಾಟಕ ಕೂಡ ಇದೇ ವೇಳೆ ಪ್ರದರ್ಶನಗೊಳ್ಳಲಿದೆ. ಸುದ್ದಿಗೋಷ್ಟಿಯಲ್ಲಿ ಶಂಕರ್ ಅಶ್ವಥ್, ರಾಜಶೇಖರ ಕದಂಬ ಭಾಗಿಯಾಗಿದ್ದರು.












Click it and Unblock the Notifications