ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ?: ಹೈವೊಲ್ಟೇಜ್ ಕ್ಷೇತ್ರವಾಗಲಿದೆಯಾ ವರುಣಾ ಕ್ಷೇತ್ರ?
ಮೈಸೂರು, ಮಾರ್ಚ್ 31: ರಾಜಕೀಯದಲ್ಲಿ ವಿದ್ಯಮಾನಗಳು ದಿನದಿಂದ ದಿನಕ್ಕೆ ಬದಲಾಗುತ್ತಲೇ ಸಾಗುತ್ತಿದೆ. ಅದರಲ್ಲೂ ಚುನಾವಣೆ ಘೋಷಣೆಯಾದ ಬಳಿಕವಂತೂ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ರಾಜಕೀಯ ನಾಯಕರು ಬೆಚ್ಚಿ ಬೀಳುವಂತೆ ಮತ್ತು ಮತದಾರರು ಅಚ್ಚರಿಪಡುವಂತೆ ಮಾಡುತ್ತಿವೆ.
ಅಂತಹ ಬೆಳವಣಿಗೆ ಪೈಕಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಕ್ಷೇತ್ರ ವರುಣಾದಲ್ಲಿ ಪ್ರತಿಸ್ಪರ್ಧಿಯಾಗಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯುತ್ತಿದ್ದಾರೆ ಎನ್ನುವುದೇ ಸಂಚಲನವನ್ನುಂಟು ಮಾಡಿದ ವಿಚಾರವಾಗಿದೆ. ಕಳೆದೊಂದು ವರ್ಷದಿಂದ ರಾಜಕೀಯವಾಗಿ ಹತ್ತು ಹಲವು ವಿಚಾರಗಳು ಮುನ್ನಲೆಗೆ ಬರುತ್ತಿದ್ದರೂ ಅವು ಕ್ರಮೇಣ ಅಷ್ಟೇ ವೇಗದಲ್ಲಿ ಅದು ಮರೆಯಾಗಿ ಮತ್ತೊಂದು ವಿಚಾರಗಳು ಹುಟ್ಟಿಕೊಳ್ಳುತ್ತಿದ್ದವು.

ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಬದಲಾವಣೆ ಮಾಡಲು ಸಮಯವೂ ಇಲ್ಲದಾಗಿದ್ದು, ಇನ್ನು ಏನು ನಿರ್ಧಾರಗಳು ಆಗುತ್ತವೆಯೋ ಅವುಗಳೇ ಅಂತಿಮ ಎಂದರೆ ತಪ್ಪಾಗಲಾರದು. ಆದರೆ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ತನಕವೂ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳು ನಡೆಯಲಿದ್ದು, ನಾಮಪತ್ರ ಮರು ಪರಿಶೀಲನೆ ಮಾಡಿ ಕ್ರಮ ಬದ್ಧ ಎಂದು ಘೋಷಣೆ ಮಾಡಿದ ಬಳಿಕವಷ್ಟೇ ಅಂತಿಮವಾಗಲಿದೆ. ಅಲ್ಲಿ ತನಕ ಪ್ರತಿ ದಿನವೂ ಬದಲಾವಣೆಯಂತು ಇದ್ದೇ ಇದೆ.
ಇಲ್ಲಿ ತನಕದ ಸಮೀಕ್ಷೆಗಳು ಒಂದು ರೀತಿಯಾದರೆ ಮುಂದಿನದೇ ಬೇರೆಯಾಗಲಿದೆ. ಹೊಸ ಮತದಾರರು ಪ್ರವೇಶ ಕೊಟ್ಟಿದ್ದು, ಅವರೆಲ್ಲವೂ ವಿದ್ಯಾವಂತರು, ತಿಳಿದವರು ಆಗಿದ್ದಾರೆ. ಹೀಗಾಗಿ ಹಿಂದಿನ ಚುನಾವಣೆಗಳಿಗೆ ಈಗಿನ ಚುನಾವಣೆಗಳಿಗೆ ಒಂದಷ್ಟು ವ್ಯತ್ಯಾಸ ಕಂಡು ಬಂದರೂ ಅಚ್ಚರಿ ಪಡಬೇಕಾಗಿಲ್ಲ.

ಯುವ ಮತದಾರರಿಗೆ ಯಾವುದು ಸರಿ? ಯಾವುದು ತಪ್ಪು? ಮತ್ತು ಈಗಿನ ವಿದ್ಯಮಾನಗಳ ಅರಿವಿದೆ. ಹಾಗಾಗಿ ಹಿಂದಿನ ಸಾಧನೆಗಳಿಗಿಂತ ಮುಂದೇನು? ಎಂಬ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಾರೆ. ಅದಕ್ಕೆ ಪೂರಕವಾಗುವಂತಹದನ್ನು ಬೆಂಬಲಿಸುತ್ತಾರೆ. ಜಾತಿ, ಧರ್ಮ, ಭಾವನಾತ್ಮಕ ವಿಚಾರ, ಸಿದ್ಧಾಂತ ಎಲ್ಲವನ್ನು ಮೀರಿ ಜನ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ.
ಸಿದ್ದರಾಮಯ್ಯಗೆ ಅದೃಷ್ಟದ ಕ್ಷೇತ್ರವಾದ ವರುಣಾ
ರಾಜಕೀಯಕ್ಕೆ ಯುವಕರು ಬರಬೇಕೆನ್ನುವುದು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವ ಮಾತಾಗಿದೆ. ಆದರೆ ಹಿರಿಯರು ಅದಕ್ಕೆ ಅವಕಾಶ ಮಾಡಿಕೊಡದಿದ್ದರೆ ಯುವಕರು ಮುಂದುವರೆಯುವುದು ಹೇಗೆ? ಒಂದು ವೇಳೆ ವರುಣಾದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ವಿಜಯೇಂದ್ರ ಅವರು ಕಣಕ್ಕಿಳಿದರೆ ಅದರ ವ್ಯಾಖ್ಯಾನಗಳು ಬೇರೆ, ಬೇರೆಯಾಗಿದ್ದು, ಇಲ್ಲಿ ಬರೀ ಪಕ್ಷ ಮಾತ್ರವಲ್ಲದೇ, ಎಲ್ಲವೂ ಜೊತೆಯಲ್ಲಿ ಎಳೆದುಕೊಂಡು ಬರುವುದಂತು ಸತ್ಯ. ಜೊತೆಗೆ ರಾಜ್ಯದಲ್ಲಿ ವರುಣಾ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರವಾಗಿ ಗಮನ ಸೆಳೆಯಲಿದೆ.

ಮೈಸೂರಿನ ಗ್ರಾಮಾಂತರ ಭಾಗದ ಕ್ಷೇತ್ರವಾಗಿರುವ ವರುಣಾ ಸಿದ್ದರಾಮಯ್ಯ ಅವರಿಗೆ ಅದೃಷ್ಟದ ಕ್ಷೇತ್ರವೂ ಹೌದು. ಇಲ್ಲಿಂದಲೇ ಗೆದ್ದು ಮುಖ್ಯಮಂತ್ರಿ ಗದ್ದುಗೆಗೇರಿದ್ದರು. ಆದರೆ ಕಳೆದ ಬಾರಿ (2018) ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಟ್ಟರು. ಅಲ್ಲಿಂದ ಸ್ಪರ್ಧಿಸಿದ ಯತೀಂದ್ರ ಗೆಲುವು ಸಾಧಿಸುವುದರೊಂದಿಗೆ ರಾಜಕೀಯ ಪ್ರವೇಶ ಮಾಡಿದ್ದರು. ಈ ಬಾರಿ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರು ಇಲ್ಲಿಂದ ಸುಲಭವಾಗಿ ಗೆಲ್ಲುತ್ತಾರೆ ಎಂಬ ಮಾತುಗಳಿದ್ದವು. ಕಾರಣ ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಸಿದ್ದರಾಮಯ್ಯ ಅವರಿಗೆ ಪ್ರಬಲ ಸ್ಪರ್ಧಿಗಳೇ ಇಲ್ಲ ಎಂದು ಹೇಳಲಾಗುತ್ತಿತ್ತು.
ಮುನ್ನಲೆಗೆ ಬಂದ ವಿಜಯೇಂದ್ರ ಸ್ಪರ್ಧೆ ವಿಚಾರ
ಇದೀಗ ಬಿಜೆಪಿಯಿಂದ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ವಿಜಯೇಂದ್ರ ಅವರು ವರುಣಾದಿಂದ ಸ್ಪರ್ಧಿಸಲಿ ಎಂಬ ಮನವಿಯನ್ನು ಈ ಹಿಂದಿನಿಂದಲೂ ಮಾಡಿಕೊಂಡು ಬರಲಾಗಿತ್ತು. ಕಳೆದ ಆರು ತಿಂಗಳ ಹಿಂದೆಯೇ ಈ ವಿಷಯ ಮುನ್ನಲೆಗೆ ಬಂದಿತ್ತು. ತದ ನಂತರ ವಿಜಯೇಂದ್ರ ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಅದರಲ್ಲೂ ಸಿದ್ದರಾಮಯ್ಯ ಅವರು ವರುಣಾದಿಂದ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದ ಬಳಿಕವಂತೂ ವಿಜಯೇಂದ್ರ ಅವರ ಹೆಸರು ಹರಿದಾಡುತ್ತಿದೆ.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಐಕಾನ್ ಆಗಿದ್ದು ಅವರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ. ಅವರು ತಮ್ಮ ಕ್ಷೇತ್ರದ ಜೊತೆಗೆ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಚುನಾವಣಾ ಪ್ರಚಾರ ನಡೆಸಬೇಕಾಗಿದೆ. ವರುಣಾದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಚುನಾವಣೆಯ ಜವಬ್ದಾರಿಯನ್ನು ಪುತ್ರ ಯತೀಂದ್ರರಿಗೆ ವಹಿಸಿ ರಾಜ್ಯದತ್ತ ಗಮನಹರಿಸುವ ಆಲೋಚನೆ ಮಾಡಿದ್ದರು. ಆದರೆ ವಿಜಯೇಂದ್ರ ಅವರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ ಎಂಬ ಸುದ್ದಿ ನಿದ್ದೆಗೆಡಿಸುವಂತೆ ಮಾಡಿದೆ.
ಸಿದ್ದರಾಮಯ್ಯರ ಅಭೇದ್ಯ ಕೋಟೆಯಲ್ಲಿ ಸಂಚಲನ
2008ರಲ್ಲಿ ರಚನೆಯಾದ ವರುಣಾ ಕ್ಷೇತ್ರದಲ್ಲಿ ಇದುವರೆಗೆ ಮೂರು ಚುನಾವಣೆಗಳು ನಡೆದಿವೆ. ಎರಡು ಬಾರಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರೆ, ಒಂದು ಬಾರಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಕ್ಷೇತ್ರ ಕಾಂಗ್ರೆಸ್‌ನ ಅಭೇದ್ಯ ಕೋಟೆಯಾಗಿದೆ. ಈ ಕೋಟೆಗೆ ನುಗ್ಗಲು ಬಿಜೆಪಿ ತಯಾರಿ ನಡೆಸಿದೆ ಎನ್ನಲಾಗುತ್ತಿದೆ.
ವರುಣಾ ಕ್ಷೇತ್ರ ರಚನೆಯಾದ ಬಳಿಕ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸಿದ್ದರಾಮಯ್ಯ ಆಯ್ಕೆಯಾಗಿದ್ದರು. ಬಳಿಕ ಪುತ್ರನ ರಾಜಕೀಯ ಭವಿಷ್ಯ ರೂಪಿಸುವ ಸಲುವಾಗಿ 2018ರಲ್ಲಿ ಕ್ಷೇತ್ರ ತ್ಯಾಗ ಮಾಡಿ ತಮ್ಮ ರಾಜಕೀಯ ಜೀವನ ರೂಪಿಸಿದ ಚಾಮುಂಡೇಶ್ವರಿ ಹಾಗೂ ದೂರದ ಬಾಗಲಕೋಟೆಯಲ್ಲಿ ಸ್ಪರ್ಧಿಸಿದರು. ಚಾಮುಂಡೇಶ್ವರಿಯಲ್ಲಿ ಭಾರೀ ಅಂತರದಿಂದ ಸೋತರೆ, ಬಾಗಲಕೋಟೆಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದರು.
2018ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡಲು ಚಿಂತಿಸಿದ್ದರು. ಅಂತೆಯೇ, ಅಂದು ನಾಯಕತ್ವದ ಕೊರತೆಯಿಂದಾಗಿ ಕ್ಷೇತ್ರದಲ್ಲಿ ಮೂರು ಭಾಗವಾಗಿದ್ದ ಬಿಜೆಪಿ ಪಕ್ಷವನ್ನು ವಿಜಯೇಂದ್ರ ಒಗ್ಗೂಡಿಸಿದ್ದರು. ಕ್ಷೇತ್ರದಾದ್ಯಂತ ತಿರುಗಾಡಿ ಪಕ್ಷದ ಮುಖಂಡರು, ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಅವರು, ಎಲ್ಲರಲ್ಲೂ ಇದ್ದ ಅಸಮಾಧಾನ ಮತ್ತು ಗೊಂದಲಗಳನ್ನು ದೂರ ಮಾಡಿ ಪಕ್ಷವನ್ನು ಒಗ್ಗೂಡಿಸಿದ್ದರು. ಆದರೆ, ಬಿಜೆಪಿ ವರಿಷ್ಠರು ಅಂತಿಮ ಗಳಿಗೆಯಲ್ಲಿ ತೋಟದಪ್ಪ ಬಸವರಾಜು ಅವರಿಗೆ ಟಿಕೆಟ್ ನೀಡಿದ್ದರು. ಆದರೂ ಬಿಜೆಪಿಯ ಪಕ್ಕಾ ಮತಗಳು ಚಲಾವಣೆಯಾಗಿದ್ದವು. ಈ ಬಾರಿ ವರುಣಾದಲ್ಲಿ ಏನೆಲ್ಲ ಬೆಳವಣಿಗೆ ಆಗಬಹುದು ಎಂಬುದು ಬಿಜೆಪಿ ಟಿಕೆಟ್ ಘೋಷಣೆ ಬಳಿಕವೇ ಗೊತ್ತಾಗಲಿದೆ.












Click it and Unblock the Notifications