ಪೊಲೀಸರ ಮುಂದೆ ಶರಣಾದ ಕೆ.ಮರೀಗೌಡ
ಮೈಸೂರು, ಆಗಸ್ಟ್ 03 : ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ಪೊಲೀಸರ ಮುಂದೆ ಶರಣಾಗಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅವರು ಮಂಗಳವಾರ ವಾಪಸ್ ಪಡೆದಿದ್ದರು.
ಬುಧವಾರ ಮಧ್ಯಾಹ್ನ ತಮ್ಮ ವಕೀಲರ ಜೊತೆ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಗೆ ಆಗಮಿಸಿದ ಕೆ.ಮರೀಗೌಡ ಅವರು ಪೊಲೀಸರ ಮುಂದೆ ಶರಣಾದರು. ಪೊಲೀಸರು ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. [ಮರೀಗೌಡ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಮತ್ತು ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರ ವಿರುದ್ಧ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ನಜರಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ವಿರುದ್ಧ ದೂರು ದಾಖಲಾದ ಬಳಿಕ ಮರೀಗೌಡ ಅವರು ತಲೆಮರೆಸಿಕೊಂಡಿದ್ದರು. ಒಂದು ತಿಂಗಳಿನಿಂದ ಪೊಲೀಸರು ಹುಡುಕಿದರೂ ಅವರು ಸಿಕ್ಕಿರಲಿಲ್ಲ.[ಮರೀಗೌಡನ ಬಂಧನಕ್ಕಾಗಿ ಮೈಸೂರಲ್ಲಿ ಹಾರಿತು ಗಾಳಿಪಟ!]
ತಮ್ಮ ವಿರುದ್ಧ ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಕೆ.ಮರೀಗೌಡ ಅವರು ಮೈಸೂರು ಜೆಎಂಎಫ್‌ಸಿ ಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು, ಆದರೆ, ಅಲ್ಲಿಯೂ ಜಾಮೀನು ಸಿಕ್ಕಿರಲಿಲ್ಲ. ಆಗಸ್ಟ್ 2ರ ಮಂಗಳವಾರ ಅವರು ಜಾಮೀನು ಅರ್ಜಿಯನ್ನು ವಾಪಸ್ ಪಡೆದಿದ್ದರು.[ಜಿಲ್ಲಾಧಿಕಾರಿಗೆ ಧಮ್ಕಿ, ಸಿದ್ದರಾಮಯ್ಯ ಮೌನವೇಕೆ?]
ಮರೀಗೌಡ ವಿರುದ್ಧ ದೂರು ಏಕೆ? : ಜುಲೈ 3ರ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಫ್ತಾರ್ ಕೂಟದಲ್ಲಿ ಭಾಗವಹಿಸಲು ಮೈಸೂರಿಗೆ ಭೇಟಿ ನೀಡಿದ್ದರು. ಶಿಷ್ಟಾಚಾರದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ ಸೇರಿದಂತೆ ಹಲವು ಅಧಿಕಾರಿಗಳು ಸರ್ಕಾರಿ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡಿದ್ದರು.
ಆಗ ಅಲ್ಲಿಗೆ ಆಗಮಿಸಿದ್ದ ಕಾಂಗ್ರೆಸ್ ಮುಂಖಡ ಕೆ.ಮರೀಗೌಡ ಅವರು ಯಾದಗಿರಿ ಉಪ ವಿಭಾಗಾಧಿಕಾರಿಯಾಗಿ ಬಡ್ತಿ ಹೊಂದಿ, ವರ್ಗಾವಣೆಯಾಗಿರುವ ನವೀನ್ ಜೋಸೆಫ್ ಅವರನ್ನು ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಹುದ್ದೆಯಿಂದ ಏಕೆ ಬಿಡುಗಡೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದರು.
ಅತಿಥಿಗೃಹದಿಂದ ಹೊರಟ ಸಿ.ಶಿಖಾ ಅವರನ್ನು ಏಕವಚನದಲ್ಲಿ ಮರೀಗೌಡ ಅವರು ನಿಂದಿಸಿದ್ದರು. ಮರೀಗೌಡ ಅವರ ಬೆಂಬಲಿಗರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ, ಕಾರು ಅಡ್ಡಹಾಕಿದ್ದರು. ಈ ಬಳಿಕ ಸಿ.ಶಿಖಾ ಅವರು ತಮ್ಮ ಕರ್ತವ್ಯಕ್ಕೆ ಮರೀಗೌಡ ಅಡ್ಡಿಸಿದ್ದಾರೆ ಎಂದು ನಜರಾಬಾದ್ ಠಾಣೆಗೆ ದೂರು ನೀಡಿದ್ದರು.












Click it and Unblock the Notifications