ಮೈಮುಲ್ ನೇಮಕಾತಿ ಪಟ್ಟಿ ಪ್ರಕಟಗೊಳ್ಳುವ ಮುನ್ನವೇ ಸಂದರ್ಶನ: ಸಾ.ರಾ ಮಹೇಶ್
ಮೈಸೂರು, ಜೂನ್ 15: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸಿಬ್ಬಂದಿಗಳ ಅಕ್ರಮ ನೇಮಕಾತಿ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ಮತ್ತಷ್ಟು ದಾಖಲೆ ಬಹಿರಂಗ ಪಡಿಸಿದರು.
ಅಭ್ಯರ್ಥಿಗಳ ನೇಮಕಾತಿಯ ಅಂತಿಮ ಪಟ್ಟಿ ಪ್ರಕಟಗೊಳ್ಳುವುದಕ್ಕೂ ಮುನ್ನವೇ ಸಂದರ್ಶನಕ್ಕೆ ಆಹ್ವಾನ ನೀಡಲಾಗಿದೆ. ಸಂದರ್ಶನಕ್ಕೆ ಆಹ್ವಾನ ನೀಡಿ ಮೈಮುಲ್ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ ಎಂದು ಸಾ.ರಾ.ಮಹೇಶ್ ದಾಖಲೆ ಸಹಿತ ಮಾಹಿತಿ ಬಹಿರಂಗಪಡಿಸಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಬೇಡಿ ಎಂದು ಈಗಾಗಲೇ ಹೈಕೋರ್ಟ್ ಆದೇಶ ನೀಡಿದೆ. ಹೀಗಿರುವಾಗ ಸಂದರ್ಶನ ನಡೆಸುವ ಅಗತ್ಯ ಏನಿದೆ. ಮೈಮುಲ್ ವಿಚಾರದಲ್ಲಿ ಪಾರದರ್ಶಕತೆ ಇಲ್ಲ, ಸ್ವಜನ ಪಕ್ಷಪಾತ ನಡೆಯುತ್ತಿದೆ ಎಂಬ ಆರೋಪ ಮಾಡುತ್ತಿದ್ದೇನೆ ಎಂದು ಪುನರುಚ್ಛರಿಸಿದರು.

ಈಗಾಗಲೇ ಕೆಲ ಅಭ್ಯರ್ಥಿಗಳು ಅರ್ಧ ಹಣ ಸೆಟಲ್ ಮಾಡಿದ್ದಾರೆ. ಬಾಕಿ ಇರುವ ಅರ್ಧ ಹಣವನ್ನು ವಸೂಲಿ ಮಾಡಿಕೊಳ್ಳುವ ಸಲುವಾಗಿ ಸಂದರ್ಶನ ನಡೆಸಲಾಗುತ್ತಿದೆ. ಮೈಮುಲ್ ನೇಮಕಾತಿ ವಿಚಾರದಲ್ಲಿ ಹೈಕೋರ್ಟ್‌ನಲ್ಲಿ ಮತ್ತೊಂದು ರಿಟ್ ಅರ್ಜಿ ಸಲ್ಲಿಕೆ ಆಗಲಿದೆ. ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಕೆ.ಆರ್ ನಗರ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ತಿಳಿಸಿದರು.












Click it and Unblock the Notifications