Women's Day 2024: ವಿನೂತನವಾಗಿ ಮಹಿಳಾ ದಿನಾಚರಣೆ ಚರಿಸಿದ ನೈಋತ್ಯ ರೈಲ್ವೆ
ಮೈಸೂರು ಮಾರ್ಚ್ 9: ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಶುಕ್ರವಾರ ವಿಶೇಷವಾಗಿ ಆಚರಿಸಿದೆ. ಮೈಸೂರು ಬೆಂಗಳೂರು ನಡುವೆ ಸಂಚರಿಸುವ ರಾಜ್ಯ ರಾಣಿ ಎಕ್ಸ್‌ಪ್ರೆಸ್ ರೈಲನ್ನು ಎಲ್ಲಾ ಮಹಿಳಾ ಸಿಬ್ಬಂದಿಯಿಂದ ನಿರ್ವಹಿಸುವ ಮೂಲಕ ಮಹಿಳಾ ದಿನವನ್ನು ಶುಕ್ರವಾರ ವಿಶೇಷವಾಗಿ ಆಚರಿಸಿತು.
ರಾಜ್ಯ ರಾಣಿ ಎಕ್ಸ್‌ಪ್ರೆಸ್ ರೈಲಿಗೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಡಿಆರ್‌ಎಂ.ಶಿಲ್ಪಿ ಅಗರ್ವಾಲ್ ಹಸಿರು ನಿಶಾನೆ ತೋರಿದರು. ನಂತರ ಮೈಸೂರು ರೈಲು ನಿಲ್ದಾಣದಲ್ಲಿ ನೆರೆದಿದ್ದ ಪ್ರಯಾಣೀಕರಿಗೆ ಗುಲಾಬಿ ಹೂವು ಮತ್ತು ಟಾಫಿಗಳನ್ನು ವಿತರಿಸಿದರು.

ಲೇಡಿ ಲೋಕೋ ಪೂಲಟ್ ಜಿ.ಶ್ರೀಶಾ, ಅಸಿಸ್ಟೆಂಟ್ ಲೋಕೋಪೈಲಟ್ ಜಿ.ಸೋನಾ, ಟ್ರೈನ್ ಮ್ಯಾನೇಜರ್ ಪ್ರಿಯದರ್ಶನಿ, ಲೇಡಿ ಟಿಕೆಟ್ ಎಕ್ಸಾಮಿನರ್ಸ್ ಮತ್ತು ಆರ್‌ಪಿಎಫ್ ಎಸ್ಕಾರ್ಟ್ ಅನ್ನು ಒಳಗೊಂಡ ಎಲ್ಲಾ ಮಹಿಳಾ ಸಿಬ್ಬಂದಿ ರಾಜ್ಯ ರಾಣಿ ಎಕ್ಸ್‌ಪ್ರೆಸ್ ರೈಲನ್ನು ದೋಷರಹಿತವಾಗಿ ನಿರ್ವಹಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಮಹಿಳಾ ದಿನಕ್ಕೆ 15 ಕ್ಯುಆರ್ ಕೋಡ್ ಅಂಚೆ ಕಾರ್ಡ್
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತವು'ನಮ್ಮ ಸಂವಿಧಾನದ ಸಂಸ್ಥಾಪಕ ತಾಯಂದಿರು' ವಿಷಯ ಕುರಿತಾಗಿ ಕ್ಯು ಆರ್ ಕೋಡ್ ಒಳಗೊಂಡ 15 ಸಚಿತ್ರ ಅಂಚೆ ಕಾರ್ಡ್ಗಳು ಮತ್ತು ವಿಶೇಷ ರದ್ಧತಿಯ ಕಾರ್ಡ್ (ಸ್ಟೆಷಲ್ ಕ್ಯಾನ್ಸಲೇಚನ್ ಕಾರ್ಡ್) ಬಿಡುಗಡೆ ಮಾಡಿದೆ.
ಶುಕ್ರವಾರ ನಗರದ ಅಂಬೇಡ್ಕರ್ ವೀದಿಯಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್..ರಾಜೇಂದ್ರಕುಮಾರ್ ಅವರು ಈ ವಿಶೇಷ ಅಂಚೆ ಕಾರ್ಡ್‌ಗಳನ್ನು ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು ಭಾರತದ ಸಂವಿಧಾನವು 75 ವರ್ಷಗಳನ್ನು ಪೂರೈಸಿದ ಈ ಸುಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತವು ಸಂವಿಧಾನ ಸಭೆಯ 15 ಮಹಿಳಾ ಸದಸ್ಯರ ಕೊಡುಗೆಯನ್ನು ಗುರುತಿಸಿ ಗೌರವಿಸಿದೆ ಎಂದರು.
ಜಗತ್ತಿನ ಎಲ್ಲ ದೇಶಗಳು ಸಹ ಅಭಿವೃದ್ಧಿಯ ಪಥದಲ್ಲಿ ತಾವು ಮುಂಚೂಣಿಯಲ್ಲಿರಬೇಕು ಎಂದು ಬಯಸುತ್ತಿರುವ ಈ ಸಂದರ್ಭದಲ್ಲಿ, ತಂತ್ರಜ್ಞಾನ, ಆವಿಷ್ಕಾರಗಳೊಂದಿಗೆ ಅನ್ಯಗ್ರಹದಲ್ಲಿ ವಾಸಿಸಲು ಯೋಗ್ಯ ಸ್ಥಳವನ್ನು ಹುಡುಕುತ್ತಿರುವ ಪ್ರಯತ್ನಗಳ ಸಂದರ್ಭದಲ್ಲಿ ಇಂದು ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ. ಹಾಗೂ ಅಂದು ಅವರ ಕೊಡುಗೆಯನ್ನು ನೆನೆಯುತ್ತಾ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.












Click it and Unblock the Notifications