ದಸರಾ ಆನೆಗಳ ಲದ್ದಿಗೆ ಎಲ್ಲಿಲದ ಬೇಡಿಕೆ, ಲದ್ದಿಗೆ ಪೂಜೆ ಸಹ ಮಾಡ್ತಿದ್ದಾರೆ!
ಮೈಸೂರು, ಸೆಪ್ಟೆಂಬರ್ 29 : ಮೈಸೂರು ದಸರಾದಲ್ಲಿ ಆನೆಗಳೇ ಪ್ರಮುಖ ಆಕರ್ಷಣೆ. ಆದರೆ ಈ ಬಾರಿಯ ದಸರಾದಲ್ಲಿ ಆನೆಗಳ ಜೊತೆಗೆ ಅವುಗಳ ಲದ್ದಿಗೂ ಡಿಮಾಂಡ್ ಬಂದಿದೆ!
ಆನೆ ಲದ್ದಿಯಿಂದ ದೇಹದ ಹಲವು ರೋಗಗಿಳಿಗೆ ಮುಕ್ತಿ ಸಿಗುತ್ತದೆ ಎಂಬ ಗುಲ್ಲು ಹರಡಿದ್ದೇ ತಡ ಮೈಸೂರಿನಲ್ಲಿ ಆನೆ ಲದ್ದಿಗೆ ಭಾರಿ ಡಿಮಾಂಡ್ ಸೃಷ್ಟಿಯಾಗಿದೆ.
ಆನೆ ಲದ್ದಿಗಿದೆ ಔಷಧೀಯ ಗುಣ
ಆನೆ ಲದ್ದಿಯನ್ನು ಗ್ರಾಮೀಣ ಪ್ರದೇಶದಲ್ಲಿ ನಾಟಿ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ಕಾಲು ಬಾಯಿ ಜ್ವರದಿಂದ ನರಳುವ ಜಾನುವಾರುಗಳಿಗೆ ಒಣಗಿದ ಆನೆ ಲದ್ದಿಯನ್ನು ಬೆಂಕಿಗೆ ಹಾಕಿ ಹೊಗೆ ಹಾಕುವುದು ರೂಢಿ. ಇದರೊಟ್ಟಿಗೆ ಬಾಣಂತಿಯರಿಗೆ ಸನ್ನಿಯಾದಾಗ ಈ ಲದ್ದಿಯಿಂದ ಔಷಧಿ ತಯಾರಿಸಿ ಕೊಡುತ್ತಾರೆ.

ಇಷ್ಟೆಲ್ಲಾ ಔಷಧೀಯ ಗುಣ ಇರುವ ಆನೆಯ ಲದ್ದಿಯನ್ನೂ ತೆಗೆದುಕೊಂಡು ಹೋಗಲು ಮೈಸೂರಿನ ಜನ ತಂಡೋಪ ತಂಡವಾಗಿ ಆನೆಗಳ ಬಿಡಾರಕ್ಕೆ ಬರುತ್ತಿದ್ದಾರೆ. ದಿನವೂ ಲದ್ದಿಗಾಗಿ ಆನೆಯ ಹಿಂದೆ ಅಣತಿ ದೂರ ಸಾಗಿ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಂಡು ವಜ್ರ ವೈಢೂರ್ಯ ಸಿಕ್ಕಂತಹ ಭಾವ ಲದ್ದಿಯನ್ನು ಮನೆಗೊಯ್ಯುತ್ತಿದ್ದಾರೆ.
ದೇಹದ ಉಷ್ಣಾಂಶ ಕಡಿಮೆ ಮಾಡುವ ಶಕ್ತಿ:
ಮೊಣಕಾಲಿನಲ್ಲಿ ಹುಣ್ಣು, ಬೊಬ್ಬೆ ಹೊಂದಿರುವವರು ಆನೆ ಲದ್ದಿಯ ಮೇಲೆ ನಿಂತರೆ ಗುಣವಾಗುತ್ತದೆ ಎಂಬ ನಂಬಿಕೆ ಇದೆ. ಇದರೊಂದಿಗೆ ಅತಿಯಾದ ಉಷ್ಣತೆ ಹೊಂದಿರುವವರು ಲದ್ದಿಯ ಮೇಲೆ ನಿಂತು ದೇಹವನ್ನು ತಂಪಾಗಿಸಿ ಕೊಳ್ಳಬಹುದು. ಇದಕ್ಕಾಗಿ ಲದ್ದಿಯ ಮೇಲೆ ಜನರು ಬರಿಗಾಲಲ್ಲಿ ನಿಲ್ಲುವುದಕ್ಕೂ ಇಲ್ಲಿ ನೂಕುನುಗ್ಗಲೇ ಉಂಟಾಗುತ್ತಿದೆ.

ಈ ಆನೆ ಲದ್ದಿಯನ್ನು ದೇವರ ಮನೆಯಲ್ಲಿ ಪೂಜೆ!
ಇಷ್ಟಕ್ಕೇ ಸುಮ್ಮನಾಗದ ಇಲ್ಲಿಯ ಜನ ಆನೆ ಲದ್ದಿಯನ್ನು ಮನೆಗೆ ಕೊಂಡೊಯ್ದು ದೇವರ ಮನೆಯಲ್ಲಿಟ್ಟು ಪೂಜಿಸುತಿದ್ದಾರೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಮೈಸೂರಿಗೆ ಬರುವ ಆನೆಗಳ ಲದ್ದಿಯನ್ನು ಪೂಜಿಸುವ ಪರಂಪರೆ ಹೊಂದಿರುವ ಜನರು ನಗರದಲ್ಲಿದ್ದಾರೆ. ಅದರಲ್ಲಿಯೂ ಜಂಬೂಸವಾರಿಯ ದಿನ ಚಿನ್ನದ ಅಂಬಾರಿಯನ್ನು ಹೊತ್ತ ಅರ್ಜುನನ ಲದ್ದಿಗೆ ಎಲ್ಲಿಲ್ಲದ ಬೇಡಿಕೆ ಇದೆ!
ದೈವ ಕಾರ್ಯ ಮಾಡುವ ಈ ಆನೆಗಳ ಲದ್ದಿಯನ್ನು ಮನೆಗೆ ತಂದು ದೇವರ ಮನೆಯಲ್ಲಿಟ್ಟು ಪೂಜಿಸಿದರೆ ಒಳಿತಾಗುತ್ತದೆಎಂಬ ಭಾವನೆ ನಗರದ ಹಲವರಲ್ಲಿದೆ. ಇದಕ್ಕೆ ದಿನವೂ ಪೂಜಿಸಿ ನಂತರ ಲದ್ದಿಯನ್ನು ಹರಿಯುವ ನೀರು ಅಥವಾ ತೆಂಗಿನ ಮರದ ಬುಡಕ್ಕೆ ಇಡುವ ವಾಡಿಕೆ.












Click it and Unblock the Notifications