ಮೈಸೂರು: ಕಬಿನಿ ಹಿನ್ನೀರಿಗೆ ವಿದೇಶಿ ಅತಿಥಿಗಳ ಆಗಮನ, ನೋಡಿದಷ್ಟು ಸಾಲದು ಇವುಗಳ ಶಿಸ್ತು ಜೀವನ
ಮೈಸೂರು, ಜನವರಿ 01: ವಿದೇಶಗಳ ಹಿಮಪ್ರದೇಶದಲ್ಲಿ ನೆಲೆಕಂಡುಕೊಂಡ ಬಾನಾಡಿಗಳು ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಸುರಕ್ಷಿತ ಜಾಗವನ್ನರಸಿ ವಲಸೆ ಹೋಗುವುದು ಸಾಮಾನ್ಯ. ಹೀಗೆ ಅಲ್ಲಿಂದ ವಲಸೆ ಹೊರಟವುಗಳು ಇದೀಗ ಹೆಚ್.ಡಿ.ಕೋಟೆಯ ಕಬಿನಿ ಹಿನ್ನೀರಿಗೆ ಬಂದು ನೆಲೆಯೂರಿವೆ. ಸದ್ಯ ವಿದೇಶದಿಂದ ಬಂದ ಈ ಅತಿಥಿಗಳು ಪ್ರವಾಸಿಗರ ಆಕರ್ಷಣೆಯಾಗಿವೆ.
ಈ ವಿದೇಶಿ ಅತಿಥಿಗಳ ಆಗಮನ ಪ್ರತಿ ವರ್ಷವೂ ನಡೆಯುತ್ತದೆ. ಸುಮಾರು ಆರು ತಿಂಗಳ ಕಾಲ ವಾಸ್ತವ್ಯ ಹೂಡಿ ಸಂತಾನೋತ್ಪತ್ತಿ ಮಾಡಿಕೊಂಡು ಮತ್ತೆ ತಮ್ಮೂರಿಗೆ ಹಿಂತಿರುಗುತ್ತವೆ. ಈ ಬಾರಿ ಹೊಸ ವರ್ಷಕ್ಕೆ ಈ ಅತಿಥಿಗಳ ಆಗಮನವಾಗಿವೆ. ಹೀಗಾಗಿ ವರ್ಷಾಚರಣೆಗೆಂದು ಆಗಮಿಸುವ ಪ್ರವಾಸಿಗರ ಮೈಮನವನ್ನು ಪುಳಕವೊಳಿಸುತ್ತಿದ್ದಾರೆ.

ಇಷ್ಟಕ್ಕೂ ಪ್ರತಿವರ್ಷ ಚಳಿಗಾಲದಲ್ಲಿ ಕಬಿನಿ ಹಿನ್ನೀರಿಗೆ ಆಗಮಿಸುವ ಈ ಬಾನಾಡಿಗಳ ಬಗ್ಗೆ ಹೇಳಬೇಕೆಂದರೆ ಇವುಗಳನ್ನು ಕನ್ನಡದಲ್ಲಿ ಹೆಬ್ಬಾತು ಎಂದು ಕರೆದರೆ ಇವುಗಳ ಆಂಗ್ಲ ಹೆಸರು ಬಾರ್ ಹೆಡೆಡ್ ಗೂಸ್. ಇವು ಮೂಲತಃ ವಿದೇಶಿ ಹಕ್ಕಿಗಳಾಗಿವೆ. ಬೂದು ಬಣ್ಣದಿಂದ ಕೂಡಿ ಬಾತುಕೋಳಿಯನ್ನು ಹೋಲುತ್ತವೆ. ಆದರೆ ಹಾರಾಟದಲ್ಲಿ ಬಾತುಕೋಳಿಗಿಂತ ಅಧಿಕ ಪಟ್ಟು ಸಾಮರ್ಥ್ಯ ಹೊಂದಿವೆ.
ಇವು ಎಲ್ಲಿಂದೆಲ್ಲ ಬರುತ್ತವೆ ಗೊತ್ತಾ?
ಕಬಿನಿ ಹಿನ್ನೀರಿನಲ್ಲಿ ವಾಸ್ತವ್ಯ ಹೂಡಿರುವ ಈ ಹೆಬ್ಬಾತುಗಳು ಮಂಗೋಲಿಯ, ಸೈಬೀರಿಯಾ, ಮಧ್ಯ ಏಷ್ಯಾ, ಟಿಬೆಟ್, ಲಡಾಕ್, ನೇಪಾಳ, ಚೀನಾ, ಹಿಮಾಲಯ, ಬರ್ಮಾ, ಶ್ರೀಲಂಕಾ ಹೀಗೆ ವಿವಿಧ ದೇಶಗಳಿಂದ ಬಂದಿರ ಬಹುದೆಂದು ಹೇಳಲಾಗುತ್ತದೆ. ಅದರಲ್ಲೂ ಹಿಮಪ್ರದೇಶದಿಂದಲೇ ಇವು ಬರುವುದು ವಿಶೇಷವಾಗಿದೆ. ಸದ್ಯ ಇಲ್ಲಿಗೆ ತೆರಳಿದವರಿಗೆ ಗೂಡು ಕಟ್ಟುವುದರಲ್ಲಿ, ಆಹಾರ ಅರಸುವುದರಲ್ಲಿ ತಲ್ಲೀನವಾದ ಹೆಬ್ಬಾತುಗಳ ದೃಶ್ಯ ಕಂಡು ಬರುತ್ತದೆ.
ಇದುವರೆಗೆ ಹೆಚ್.ಡಿ.ಕೋಟೆಗೆ ತೆರಳಿದವರಿಗೆ ನಾಗರಹೊಳೆ ಮತ್ತು ಬಂಡೀಪುರ ವನ್ಯಜೀವಿ ವಲಯದ ದಟ್ಟ ಕಾಡುಗಳು, ಅರಣ್ಯದ ನಡುವೆ ಸಫಾರಿಯಲ್ಲಿ ಹುಲಿ, ಚಿರತೆ, ಕಾಡಾನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಹಲವು ಪ್ರಾಣಿಗಳ ದರ್ಶನವಾಗುತ್ತಿತ್ತು. ಆದರೆ ಕೆಲವೇ ಕೆಲವು ಹಕ್ಕಿಗಳನ್ನು ಹೊರತುಪಡಿಸಿದರೆ ಮತ್ಯಾವುದರ ದರ್ಶನವಾಗುತ್ತಿರಲಿಲ್ಲ.

ಹೆಬ್ಬಾತುಗಳ ಆಟ ಪಕ್ಷಿ ಪ್ರೇಮಿಗಳಿಗೆ ರಸದೂಟ
ಈಗ ಗುಂಪುಗುಂಪಾಗಿ ದಂಡೆತ್ತಿ ಬಂದಿರುವ ಹೆಬ್ಬಾತುಗಳು ಕಬಿನಿ ಜಲಾಶಯದ ಹಿನ್ನೀರು ಪ್ರದೇಶಗಳಲ್ಲಿ ಹಾರಾಡುವ ದೃಶ್ಯಗಳಂತು ಮನಮೋಹಕವಾಗಿವೆ. ಹಿನ್ನೀರಿನ ದಡದಲ್ಲಿ ಸೈನಿಕರಂತೆ ಶಿಸ್ತಿನಿಂದ ಓಡಾಡುವ ಮತ್ತು ಬಯಲಿನಲ್ಲಿ ಚಳಿಕಾಯಿಸುತ್ತಾ ತುಂಟಾಟ ಆಡುವ, ಆಹಾರ ಅರಸುತ್ತಾ ಸುತ್ತಮುತ್ತಲ ಜಮೀನುಗಳಲ್ಲಿ ಅಡ್ಡಾಡುವ ದೃಶ್ಯಗಳು ಸುಂದರವಾಗಿದೆ. ಅದರಲ್ಲೂ ಪಕ್ಷಿ ಪ್ರಿಯರಿಗೆ ಖುಷಿಕೊಡುತ್ತಿದೆ.
ದೇಶ ವಿದೇಶಗಳಿಂದ ಹಾರಿಬರುವ ಸಹಸ್ರಾರು ಈ ಹಕ್ಕಿಗಳು ಚಳಿಗಾಲ ಮತ್ತು ಬೇಸಿಗೆಯನ್ನು ಇಲ್ಲಿಯೇ ಕಳೆಯುತ್ತದೆ. ಅಷ್ಟರಲ್ಲೇ ಗೂಡುಕಟ್ಟಿ ಮರಿಮಾಡಿ ಅವುಗಳೆಲ್ಲವೂ ಹಾರಾಡಲು ಶಕ್ತರಾಗುತ್ತಿದ್ದಂತೆಯೇ ಮಳೆಗಾಲ ಶುರುವಾಗುತ್ತದೆ. ಆ ವೇಳೆಗೆ ತಮ್ಮ ಊರಿನ ಹಾದಿ ಹಿಡಿಯುತ್ತವೆ. ಸಹಸ್ರಾರು ಕಿ,ಮೀ, ದೂರದಿಂದ ಹಾರಿ ಬರುವ ಈ ಹಕ್ಕಿಗಳು ಇಲ್ಲಿನ ಕೃಷಿಕರಿಗೂ ಮಿತ್ರರಂತೆ ಕೆಲಸ ಮಾಡುತ್ತಿವೆ.
ಇವು ಸಸ್ಯಾಹಾರಿ ನಿಶಾಚರಿ ಪಕ್ಷಿಗಳು
ಕಳೆದೊಂದು ದಶಕದಿಂದ ವಲಸೆ ಬರುತ್ತಿರುವ ಹೆಬ್ಬಾತುಗಳು ಬೆಳಗಾಗುತ್ತಿದ್ದಂತೆಯೇ ರೈತರ ಹೊಲಗದ್ದೆಗಳಿಗೆ ತೆರಳುತ್ತವೆ. ಸಸ್ಯಾಹಾರಿಗಳಾಗಿರುವ ಇವು ಗದ್ದೆಯಲ್ಲಿ ಅಡ್ಡಾಡಿ ಕೊಯ್ಲು ಮಾಡುವಾಗ ಬಿದ್ದಿರುವ ಭತ್ತ, ಕಾಳುಗಳನ್ನು ಮಾತ್ರವಲ್ಲದೆ ಗದ್ದೆಯಲ್ಲಿ ಚಿಗುರೊಡೆವ ಭತ್ತದ ಚಿಗುರು, ಹುಲ್ಲು ಹೀಗೆ ಎಲ್ಲವನ್ನು ತಿನ್ನುತ್ತವೆ. ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆಯೇ ಕಬಿನಿ ಹಿನ್ನೀರಿನತ್ತ ಮುಖಮಾಡಿ ನೀರಿನಲ್ಲಿ ಆಟವಾಡುತ್ತವೆ. ತದನಂತರ ಸಂಜೆಯಾಗುತ್ತಿದ್ದಂತೆಯೇ ಕೆಲಕಾಲ ಆಹಾರ ಅರಸುವಿಕೆಯಲ್ಲಿ ತೊಡಗುತ್ತವೆ.

ಈ ಹೆಬ್ಬಾತುಗಳು ಗದ್ದೆಗಳಲ್ಲಿ ಹಾಕುವ ಹಿಕ್ಕೆ ಗೊಬ್ಬರವಾಗಿರುವುದರಿಂದ ರೈತರಿಗೂ ಅನುಕೂಲವೇ ಹೀಗಾಗಿ ಅವುಗಳಿಗೆ ಯಾರೂ ತೊಂದರೆ ಮಾಡುವುದಿಲ್ಲ. ಕೆಲವು ವರ್ಷಗಳ ಹಿಂದೆ ಅವುಗಳನ್ನು ಓಡಿಸುವ ಸಂದರ್ಭ ಬಾತು ಸತ್ತು ಹೋಗಿದ್ದರಿಂದ ಹೆದರಿ ಕೆಲ ವರ್ಷ ಬಂದಿರಲಿಲ್ಲ. ಆದರೆ ಈಗ ಯಾರೂ ಅವುಗಳ ತಂಟೆಗೆ ಹೋಗದ ಕಾರಣದಿಂದ ಐದಾರು ವರ್ಷಗಳಿಂದ ಖಾಯಂ ಆಗಿ ಬರುತ್ತಿವೆ. ಆದರೆ ವರ್ಷದಿಂದ ವರ್ಷಕ್ಕೆ ವಲಸೆ ಬರುವ ಹೆಬ್ಬಾತುಗಳ ಸಂಖ್ಯೆ ಕಡಿಮೆಯಾಗಿದ್ದು, ಸಂತಾನೋತ್ಪತ್ತಿ ಬಳಿಕ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಹೋಗುತ್ತವೆ.
ಇವುಗಳದ್ದು ಶಿಸ್ತಿನ ಜೀವನ ಶೈಲಿ
ಈ ಬಾತುಗಳ ವಿಶೇಷತೆ ಏನೆಂದರೆ ಇವು ಸಸ್ಯಹಾರಿ ಹಕ್ಕಿಗಳಾಗಿದ್ದು ನಿಶಾಚರಿಯೂ ಆಗಿವೆ. ಇವುಗಳದು ಶಿಸ್ತಿನ ಜೀವನವಾಗಿದೆ. ಬೆಳಗ್ಗೆ ಆರು ಗಂಟೆಯಿಂದ ಸುಮಾರು ಹತ್ತರಿಂದ ಹನ್ನೊಂದು ಗಂಟೆ ತನಕ ಗದ್ದೆಯಲ್ಲಿ ಆಹಾರವನ್ನು ತಿನ್ನುತ್ತವೆ, ನಂತರ ಬಿಸಿಲು ಹೆಚ್ಚಾಗುತ್ತಿದ್ದಂತೆ ಕಬಿನಿ ಹಿನ್ನೀರಿನ ನೀರಿನಲ್ಲಿ ಬಂದು ಆಶ್ರಯಿಸುತ್ತವೆ. ಪುನಃ ಸಂಜೆಯ ಹೊತ್ತಿಗೆ ಭತ್ತದ ಕಟಾವು ಆಗಿರುವ ಗದ್ದೆಯ ಬಯಲು ಪ್ರದೇಶಕ್ಕೆ ಹೋಗಿ ರಾತ್ರಿಯ ವೇಳೆಯಲ್ಲೂ ಆಹಾರದ ಹುಡುಕಾಟ ನಡೆಸುತ್ತವೆ.
ಸಂಜೆ ಮತ್ತು ಮುಂಜಾನೆ ಹಿನ್ನೀರಿನ ದಡದಲ್ಲಿ ಹಾರಾಡುವ ದೃಶ್ಯ ಸುಂದರವಾಗಿರುತ್ತವೆ. ಒಂದೊಂದು ಗುಂಪಿನಲ್ಲಿ ನೂರಾರು ಬಾತುಕೋಳಿಗಳಿದ್ದು, ಪ್ರತಿನಿತ್ಯ 4 ರಿಂದ 5ಗಂಟೆಗಳ ಕಾಲ ಭತ್ತ ಕಟಾವು ಮಾಡಿರುವ ಗದ್ದೆಯಲ್ಲಿ ಬೀಡುಬಿಡುವುದರಿಂದ ಪಿಕ್ಕೆ ಹಾಕುತ್ತವೆ. ಇದು ಜಮೀನಿಗೆ ಉತ್ತಮ ಗೊಬ್ಬರವಾಗುತ್ತದೆ. ಯಾರದರೂ ಕಲ್ಲು ಹೊಡೆಯುವುದು, ಇನ್ಯಾವುದಾದರೂ ರೀತಿಯಲ್ಲಿ ತೊಂದರೆ ಕೊಟ್ಟರೆ ಮತ್ತೆ ಅವು ಆ ಕಡೆಗೆ ಹೋಗುವುದಿಲ್ಲ.

ಕಬಿನಿ ಹಿನ್ನೀರಿನ ಪ್ರಮುಖ ಆಕರ್ಷಣೆ
ಈ ಬಾತುಗಳು ವಲಸೆ ಬರುವಾಗ ದಿನವೊಂದಕ್ಕೆ ನೂರಾರು ಕಿ.ಮೀ ಹಾರುತ್ತವೆ. ಹಿಮಾಲಯ ಪರ್ವತವನ್ನು ದಾಟಲು 18 ಸಾವಿರದಿಂದ 26 ಸಾವಿರ ಅಡಿಗಳವರೆಗೆ ಎತ್ತರದಲ್ಲಿ ಹಾರಿ ಬರುತ್ತವೆ ಎನ್ನಲಾಗಿದ್ದು, ಆ ಕಾರಣಕ್ಕೆ ಇವುಗಳನ್ನು ಪರ್ವತ ಹಕ್ಕಿಗಳೆಂದು ಕೂಡ ಕರೆಯುತ್ತಾರೆ ಎಂದು ಹೇಳಲಾಗಿದೆ. ಅದು ಏನೇ ಇರಲಿ ಸದ್ಯಕ್ಕೆ ಇವು ಕಬಿನಿ ಹಿನ್ನೀರಿಗೆ ಬಂದಿರುವ ವಿದೇಶಿ ಅತಿಥಿಗಳಾಗಿದ್ದು, ಪ್ರವಾಸಿಗರ ಆಕರ್ಷಣೆಯಾಗಿವೆ.












Click it and Unblock the Notifications