ಮೈಸೂರಿನ ಈ ರೈತನ ಜಮೀನು ಕಾಯೋದೇ ಆ್ಯಂಕರ್ ಅನುಶ್ರೀ ಮತ್ತು ತಂಡ
ಮೈಸೂರು, ಫೆಬ್ರವರಿ 20: ಇತ್ತೀಚಿಗೆ ರೈತರಿಗೆ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಮಳೆ, ಬಿಸಿಲು, ಕಾಡು ಪ್ರಾಣಿಗಳ ಹಾವಳಿ, ಕಳ್ಳರ ಕಾಟ, ಕೀಟ ಬಾಧೆ ಹೀಗೆ ಹತ್ತಾರು ಸಮಸ್ಯೆಗಳಿಂದ ರೈತರಿಗೆ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಒಂದು ವೇಳೆ ಈ ಸವಾಲುಗಳನ್ನೆಲ್ಲಾ ಎದುರಿಸಿ ಉತ್ತಮ ಬೆಳೆ ಬಂದರೆ ಜನರ ದೃಷ್ಟಿ ಬೀಳುತ್ತದೆ ಎನ್ನುವ ಭಯಕೂಡ ರೈತರಲ್ಲಿದೆ. ಹೀಗಾಗಿ ಬೆಳೆಗೆ ಯಾರ ದೃಷ್ಟಿತಾಕದಂತೆ ಜಮೀನಿಗೆ ದೃಷ್ಟಿ ಗೊಂಬೆಗಳನ್ನು ಹಾಕುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ತನ್ನ ಅತಿ ಬುದ್ಧಿವಂತಿಕೆ ತೋರಿಸಿದ್ದಾರೆ.
ಹೌದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದ ರೈತ ಸೋಮೇಶ್ ತಮ್ಮ ಜಮೀನಿಗೆ ದೃಷ್ಟಿ ಗೊಂಬೆಯಾಗಿ ಮಾಡಲ್‌ಗಳ ಫೋಟೋ ಅಳವಡಿಸಿದ್ದಾರೆ. ನಂಜನಗೂಡಿನಿಂದ ಮಡಹಳ್ಳಿ ಹಾಗೂ ತಗಡೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ನಾಲ್ಕು ಎಕರೆಯಲ್ಲಿ ರೈತ ಸೋಮೇಶ್ ಬಾಳೆ ಬೆಳೆದಿದ್ದಾರೆ. ಮಳೆ, ಬಿಸಿಲು, ಚಳಿ ಎನ್ನದೇ ಜಮೀನನಲ್ಲಿ ಕೆಲಸ ಮಾಡಿ ಉತ್ತಮ ಬೆಳೆ ಬೆಳೆದು ಕಾಡು ಪ್ರಾಣಿಗಳ ಹಾವಳಿ, ಕಳ್ಳರ ಕಾಟದಿಂದ ಅದನ್ನು ರಕ್ಷಿಸಿಕೊಂಡಿದ್ದಾರೆ.

ಕಕ್ಕರಹಟ್ಟಿ ಗ್ರಾಮದ ರೈತ ಸೋಮೇಶ್ ಅವರ ಜಮೀನಿನಲ್ಲಿ ನಾಲ್ಕು ಎಕರೆಯಲ್ಲೂ ಬಾಳೆ ಬೆಳೆ ಸೊಗಸಾಗಿ ಮೂಡಿ ಬಂದಿದೆ. ಎಷ್ಟರ ಮಟ್ಟಿಗೆ ಅಂದರೆ ನಂಜನಗೂಡಿನಿಂದ ಮಡಹಳ್ಳಿ ಹಾಗೂ ತಗಡೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಚಲಿಸುವವರು ಒಮ್ಮೆ ಈ ಬಾಳೆ ತೋಟದತ್ತ ನೋಡಿ. ಆಹಾ..! ಎನ್ನಬೇಕು ಅಷ್ಟರ ಮಟ್ಟಿಗೆ ಸೋಮೇಶ್ ಅವರ ತೋಟ ಸೊಗಸಾಗಿದೆ. ಹೀಗಾಗಿ ಸೋಮೇಶ್ ತಮ್ಮ ಜಮೀನಿಗೆ ಯಾರ ದೃಷ್ಟಿಯೂ ಬೀಳ ಬಾರದು ಎಂದು ಸೂಪರ್ ಐಡಿಯಾ ಮಾಡಿದ್ದಾರೆ.
ಬಾಳೆ ತೋಟದ ಮೇಲೆ ಯಾರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆಗಳ ಬದಲಿಗೆ ಕೆಲವು ಮಾಡೆಲ್‌ಗಳ ಫೋಟೋವನ್ನು ತೋಟದ ಸುತ್ತಲೂ ಅಳವಡಿಸಿದ್ದಾರೆ. ತನ್ನ ಜಮೀನಿನ ಸುತ್ತು ಸುಮಾರು 10 ಸ್ಥಳಗಳಲ್ಲಿ ಮಾಡೆಲ್ ಚಿತ್ರಗಳು ಅಳವಡಿಕೆ ಮಾಡಿರುವ ರೈತ ಸೋಮೇಶ್ ,

ಸಾರ್ವಜನಿಕರು ಈ ಜಮೀನು ಸುತ್ತಮುತ್ತ ಹಾದು ಹೋಗುವಾಗ ತೋಟದ ಬೆಳೆಗಳನ್ನು ನೋಡದೇ, ಅಲ್ಲಿ ಅಳವಡಿಸಿರುವ ಮಾಡೆಲ್ಗಳ ಫೋಟೋಗಳನ್ನೇ ನೋಡುತ್ತಾರೆ. ಇದರಿಂದ ಕೆಟ್ಟ ಕಣ್ಣುಗಳು ನನ್ನ ಬೆಳೆ ಮೇಲಾಗಲೀ, ತೋಟದ ಮೇಲಾಗಲಿ ಬೀಳುತ್ತಿಲ್ಲ' ಎಂದಿದ್ದಾರೆ.
ಕಕ್ಕರಹಟ್ಟಿ ಗ್ರಾಮದ ರೈತ ಸೋಮೇಶ್ ಅವರ ಐಡಿಯಾಗೆ ನೋಡುಗರು ಫಿದಾ ಆಗಿದ್ದು, ಅವರ ಜಮೀನಿನಲ್ಲಿ ನಿಲ್ಲಿಸಲಾದ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಕನ್ನಡ ಖ್ಯಾತ ನಿರೂಪಕಿ ಅನುಶ್ರೀ ಫೋಟೋ ಕೂಡ ಇದ್ದು, ಆ್ಯಂಕರ್ ಅನುಶ್ರೀ ಮತ್ತು ತಂಡ ಈ ಜಮೀನನ್ನು ಕಾಯುತ್ತಿದ್ದಾರೆ ಎನ್ನುವ ತಮಾಷೆ ಕಮೆಂಟ್‌ಗಳು ಕೂಡ ಕೇಳಿ ಬರುತ್ತಿದೆ.












Click it and Unblock the Notifications