ಎಂಥವರ ಮನವನ್ನೂ ಕರಗಿಸುವ ಗೋ 'ಮಾತೃ'ಪ್ರೇಮದ ವರದಿಯಿದು...
ಮೈಸೂರು, ಅಕ್ಟೋಬರ್ 5 : ಮಾತೃಪ್ರೇಮ ಅನ್ನೋದು ಮನುಷ್ಯರಿಗೆ ಮಾತ್ರ ಅನ್ವಯಿಸುವಂಥ ಸಂಗತಿಯಲ್ಲ ಎಂಬುದು ಸಾಕಷ್ಟು ಸಲ ಸಾಬೀತಾಗಿದೆ. ದನಕಳ್ಳರ ಕೈಗೆ ಸಿಕ್ಕಿ, ಕಾಲು ಮುರಿದುಕೊಂಡಿದ್ದರೂ ಕರು ಹಾಕುವ ತನಕ ಬದುಕಿದ್ದ ಗೋ ಮಾತೆಯ ಬಗ್ಗೆ ಕೂಡ ಓದಿರುತ್ತೀರಿ. ಈ ವರದಿಯೂ ಅದೇ ರೀತಿ ಮನ ಕರಗುವಂತೆ ಮಾಡಿ, ಅಚ್ಚರಿ ಹುಟ್ಟಿಸುವಂತಿದೆ.
ಮೈಸೂರಿನ ರಾಮಕೃಷ್ಣನಗರದ ಎಚ್ ಬ್ಲಾಕ್ ನಲ್ಲಿ ಎ.ಪಿ.ಜಗದೀಶ್ ಈ ರಾಸುವಿನ ಮಾಲೀಕರು. ಕಳೆದ ಮಂಗಳವಾರ ನಾಲ್ಕು ದಿನದ ಕರು ಸಾವನ್ನಪ್ಪಿತು. ಆ ನಂತರ ತಾಯಿ ಹಸು ಹಾಲು ಕೊಡುವುದೇ ನಿಂತುಹೋಯಿತು. ಆತಂಕಕ್ಕೆ ಈಡಾದ ಜಗದೀಶ್ ಒಂದು ಪ್ರಯತ್ನ ಎಂಬಂತೆ ಕರುವಿನ ತೊಗಲಿಗೆ ಹುಲ್ಲು ತುಂಬಿ, ಹಸುವಿನ ಬಳಿ ತೆಗೆದುಕೊಂಡು ಹೋದರು.

ಅಚ್ಚರಿ ಎಂಬಂತೆ ಹಸು ಹಾಲು ನೀಡಲು ಆರಂಭಿಸಿತು. ಜಗದೀಶ್ ಅವರ ಬಳಿ ಹತ್ತು ಹಸುಗಳಿವೆ. ತೀರಿಕೊಂಡಿದ್ದು ಆ ಹಸು ಹಾಕಿದ ಇಪ್ಪತ್ತೆರಡನೇ ಕರು. ಈಗ ಹುಲ್ಲು ತುಂಬಿರುವ ಕರುವನ್ನು ಹತ್ತಿರ ತೆಗೆದುಕೊಂಡು ಹೋದರೆ ಅದು ಬದುಕಿದೆಯೇನೋ ಎಂದು ತಿಳಿದೇ ಹಸು ಹಾಲು ಕೊಡುತ್ತಿದೆ. ಅದೂ ದಿನಕ್ಕೆ ಇಪ್ಪತ್ತೈದು ಲೀಟರ್ ಹಾಲು ನೀಡುತ್ತಿದೆ ಎನ್ನುತ್ತಾರೆ ಜಗದೀಶ್.
ವಾತ್ಸಲ್ಯ, ಅಕ್ಕರೆ, ಮಮತೆ, ಅಂತಃಕರಣ, ಮಾತೃ ಹೃದಯ ಅನ್ನೋ ಭಾವನೆಗೆ ಮನುಷ್ಯರು-ಪ್ರಾಣಿಗಳು ಎಂಬ ಭೇದವಿಲ್ಲವೇನೋ! ಇದಕ್ಕೆ ನೀವೇನಂತೀರಿ?












Click it and Unblock the Notifications