ಬಂಡೀಪುರದಲ್ಲಿ ಮತ್ತೆ ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್
ಗುಂಡ್ಲುಪೇಟೆ, ಜನವರಿ 29: ಕೆಲವು ದಿನಗಳ ಹಿಂದೆಯಷ್ಟೆ ಅರಣ್ಯ ಇಲಾಖೆ ಸಿಬ್ಬಂದಿ ಬಂಡೀಪುರ ಅರಣ್ಯದಲ್ಲಿ ಬೇಟೆಗಾರರಿಗೆ ಬಿಸಿಮುಟ್ಟಿಸುವ ಸಲುವಾಗಿ ಕೂಂಬಿಂಗ್ ನಡೆಸಿದ್ದರು. ಇದೀಗ ಮತ್ತೆ ನಕ್ಸಲ್ ನಿಗ್ರಹ ಪಡೆಯ ಯೋಧರು ಕೂಂಬಿಂಗ್ ನಡೆಸಿದ್ದಾರೆ.
ಬಂಡೀಪುರ ಅರಣ್ಯದಲ್ಲಿ ನೆರೆರಾಜ್ಯಗಳಿಂದ ನಕ್ಸಲರು ನುಸುಳಿದ್ದಾರೆ ಎಂಬ ವದಂತಿಗಳು ಹರಡಿದ್ದು, ಗಡಿಭಾಗದ ಮೂಲಕ ರಾಜ್ಯದೊಳಗೆ ನುಗ್ಗುವ ಸಾಧ್ಯತೆಗಳು ಹೆಚ್ಚಿರುವ ಕಾರಣದಿಂದಾಗಿ ಮುಂಜಾಗ್ರತೆ ಕ್ರಮವಾಗಿ ನಕ್ಸಲ್ ನಿಗ್ರಹ ಪಡೆಯ ಯೋಧರು ಕೂಂಬಿಂಗ್ ನಡೆಸಿದ್ದಾರೆ.
ಮೊದಲನೇ ದಿನ ಸೋಮವಾರ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯ ಕೇರಳ ರಾಜ್ಯದ ಗಡಿಯಲ್ಲಿರುವ ಮೂಲೆ ಹೊಳೆ ತಮಿಳುನಾಡು ಗಡಿಯಲ್ಲಿರುವ ಬಂಡೀಪುರ ವಲಯಗಳಲ್ಲಿ ಕೂಂಬಿಂಗ್ ನಡೆಸಲಾಯಿತು.

ಕಾರ್ಯಾಚರಣೆ ಮೂರು ದಿನಗಳ ಕಾಲ ನಡೆಯಲಿದ್ದು, ಸೋಮವಾರ ಆರಂಭಿಸಿದ್ದು, ಇನ್ನೂ ಎರಡು ದಿನ ಕಾಲ ಕಾರ್ಯಾಚರಣೆ ನಡೆಯಲಿದೆ. ಚಾಮರಾಜನಗರ ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ನಕ್ಸಲ್ ನಿಗ್ರಹ ಪಡೆಯ ಡಿವೈಎಸ್‌ಪಿ ಪ್ರಸನ್ನಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ ಎನ್ನಲಾಗಿದೆ.
ಒಟ್ಟಾರೆ ಬಂಡೀಪುರ ಅರಣ್ಯದತ್ತ ಅರಣ್ಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ನಿಗಾವಹಿಸಿದ್ದು, ಕಳ್ಳಬೇಟೆ, ನಕ್ಸಲ್ ಚಟುವಟಿಕೆಯತ್ತ ಹದ್ದಿನ ಕಣ್ಣಿಟ್ಟಿದ್ದಾರೆ.












Click it and Unblock the Notifications