ಡಿ.ಜಿ.ಬಾಲಕೃಷ್ಣನ್ ಅವರನ್ನು ಮೊದಲು ಎತ್ತಂಗಡಿ ಮಾಡಲಿ:ಕುಮಾರಸ್ವಾಮಿ
ಮೈಸೂರು, ಮಾರ್ಚ್ 28:ಲೋಕಸಭಾ ಚುನಾವಣೆ ವೇಳೆ ಐಟಿ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ. ಬಿಜೆಪಿಯವರು ತೆರಿಗೆ ಇಲಾಖೆ ಯಾರ ಮೇಲೆ ದಾಳಿ ನಡೆಸಬೇಕೆಂಬ ಪಟ್ಟಿಯನ್ನು ನೀಡಿದ್ದಾರೆ. ಅದರ ಪ್ರಕಾರವೇ ದಾಳಿ ನಡೆದಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ನಾಯಕರ ಮನೆ ಮೇಲೆ ಐಟಿ ದಾಳಿಯ ಕುರಿತು ನಾನು ಮಂಡ್ಯದಲ್ಲಿ ಹೇಳಿದ್ದೆ. ರಾಜ್ಯ ಸರ್ಕಾರದ ಕಚೇರಿಗಳ ಮೇಲೂ ದಾಳಿ ನಡೆಸಿದ್ದಾರೆ. ರಾಮನಗರ, ಕನಕಪುರ ತಾಲೂಕು ಕಚೇರಿ ಮೇಲೆ ದಾಳಿ ಹೊಸ ರೀತಿಯ ಬೆಳವಣಿಗೆ. ಹೊಸನಗರದಲ್ಲಿ 2 ಕೋಟಿ ಹಿಡಿದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಐಟಿ ಮುಖ್ಯಸ್ಥ ಬಾಲಕೃಷ್ಣನ್ ಸ್ಪಷ್ಟನೆ ನೀಡಿಲ್ಲ. ಆದರೆ ಬಿಎಸ್ ವೈ 1800 ಕೋಟಿ ಕಪ್ಪ ನೀಡಿದ ಪ್ರಕರಣದ ಬಗ್ಗೆ ಮಾತ್ರ ಸ್ಪಷ್ಟನೆ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಯಾರ ಮೇಲೆ ದಾಳಿ ಮಾಡಬೇಕೆಂದು ಪಟ್ಟಿ ಮಾಡುತ್ತಾರೆ. ಅದನ್ನ ಅಮಿತ್ ಶಾಗೆ ಕಳುಹಿಸುತ್ತಾರೆ. ಅವರು ಅದನ್ನ ಐಟಿ ಮುಖ್ಯಸ್ಥ ಬಾಲಕೃಷ್ಣನ್ ಗೆ ಕಳುಹಿಸುತ್ತಾರೆ. ಆ ಪಟ್ಟಿ ಆಧಾರವಾಗಿ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ಸಿಎಂ ದೂರಿದರು.

ಯಡಿಯೂರಪ್ಪ ಅವರ ಹಗರಣಗಳ ಬಗ್ಗೆ ಲೆಕ್ಕವೇ ಇಲ್ಲ. ಕೆ.ಎಸ್. ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕಿತ್ತು. ನನ್ನ ಮನೆ, ಆಸ್ತಿ ಬಗ್ಗೆ ಡಿ. ಜಿ.ಬಾಲಕೃಷ್ಣನ್ ಶೋಧ ಮಾಡುತ್ತಾರೆ. ಸಮರ್ಥವಾಗಿ ಕೆಲಸ ಮಾಡುವ ಅಧಿಕಾರಿಯನ್ನು ಮೊದಲು ನೇಮಿಸಲಿ. ಬಾಲಕೃಷ್ಣನ್ ಎತ್ತಂಗಡಿ ಮಾಡಲಿ ಎಂದು ಕುಮಾರಸ್ವಾಮಿ ಕಿಡಿಕಾರಿದರು.












Click it and Unblock the Notifications