ಚಂದ್ರಯಾನ-3 ಯಶಸ್ಸಿಗಾಗಿ ಮೈಸೂರು ಬಿಜೆಪಿ ಮುಖಂಡರ ಮಂತ್ರಾಲಯ ಯಾತ್ರೆ
ಮೈಸೂರು, ಆಗಸ್ಟ್ 23: ಚಂದ್ರಯಾನ-3 ಯಶಸ್ವಿಗಾಗಿ ಪ್ರಾರ್ಥಿಸಲು ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಮೈಸೂರು ಬಿಜೆಪಿಯ 82 ಪದಾಧಿಕಾರಿಗಳು ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದರು.
ಈ ಬಗ್ಗೆ ಮಾತನಾಡಿದ ಶಾಸಕ ಎಸ್.ಟಿ.ಶ್ರೀವತ್ಸ, ಚಂದ್ರಯಾನ-3 ಭಾರತಕ್ಕೆ ಹೆಮ್ಮೆಯ ಸಂಗತಿ. ಇಸ್ರೋ ವಿಜ್ಞಾನಿಗಳು ಇದೀಗ ವಿಶ್ವದ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಲ್ಯಾಂಡಿಂಗ್ ಯಶಸ್ವಿಯಾಗಿ ಆಗಲಿ ಎಂಬ ಉದ್ದೇಶದಿಂದ ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದ್ದೇವೆ ಎಂದು ತಿಳಿಸಿದರು.

ಮೈಸೂರು ನಗರ ಅಧ್ಯಕ್ಷ, ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆಯಲ್ಲಿ ಇಂದು(ಆಗಸ್ಟ್ 23) ಬೆಳಗ್ಗೆ 11ಕ್ಕೆ ಮಂತ್ರಾಲಯದಲ್ಲಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಬಸವ ಎಕ್ಸ್‌ಪ್ರೆಸ್‌ನಲ್ಲಿ ನಗರದಿಂದ ಪ್ರಯಾಣ ಬೆಳೆಸಿರುವ ಪದಾಧಿಕಾರಿಗಳು ಮುಂಜಾನೆ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲಿದ್ದಾರೆ. ಬಳಿಕ ಪದಾಧಿಕಾರಿಗಳ ಸಭೆ ನಡೆಯಲಿದೆ.
ಈ ವೇಳೆ ನಗರ ಬಿಜೆಪಿ ಕಾರ್ಯಾಧ್ಯಕ್ಷ ಎಚ್.ಜಿ.ಗಿರಿಧರ್, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ಪ್ರಧಾನ ಕಾರ್ಯದರ್ಶಿಗಳಾದ ವಿ.ಸೋಮಸುಂದರ್, ವಾಣೀಶ್‌ಕುಮಾರ್, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮಾಜಿ ಅಧ್ಯಕ್ಷ ಎಸ್.ಡಿ.ಮಹೇಂದ್ರ, ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿಲ್ ಥಾಮಸ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಚಂದ್ರಯಾನ -3 ಯಶಸ್ಸಿಗಾಗಿ ದೇಗುಲಗಳಲ್ಲಿ ವಿಶೇಷ ಪೂಜೆ
ಚಂದ್ರಯಾನ -3ರ ವಿಕ್ರಮ್ ಲ್ಯಾಂಡರ್ ಯಶಸ್ವಿ ಲ್ಯಾಂಡಿಂಗ್‌ಗಾಗಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘಟನೆ ಹಾಗೂ ಅರ್ಚಕರ ಸಂಘದ ವತಿಯಿಂದ ಇರ್ವಿನ್ ರಸ್ತೆಯಲ್ಲಿರುವ ಪುರಾತನ ಶ್ರೀಪಂಚಮುಖಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಸರ್ವಸಿದ್ಧ ಯಾಗ ನೆರವೇರಿಸಲಾಯಿತು.

ಈ ಬಗ್ಗೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, 'ಈ ಅಪೂರ್ವ ಸಾಧನೆಗೆ ಕಾರಣರಾದ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ಅಧ್ಯಕ್ಷರು ಹಾಗೂ ವಿಜ್ಞಾನಿಗಳಿಗೆ ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಲಾಗಿದೆ. ವಿಕ್ರಮ್ ಲ್ಯಾಂಡರ್ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯಲಿ. ಈ ಯೋಜನೆ ಇತಿಹಾಸ ನಿರ್ಮಿಸಲಿ. ರಾಷ್ಟ್ರದ ಹೆಸರು ಪ್ರಪಂಚದಲ್ಲಿ ಅಗ್ರಗಣ್ಯವಾಗಲಿ' ಎಂದು ಆಶಿಸಿದರು.
ಮೈಸೂರು ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಸುಚೀಂದ್ರ, ಅಪೂರ್ವ ಸುರೇಶ್, ಎಸ್.ಎನ್.ರಾಜೇಶ್, ಆನಂದ್, ರಾಕೇಶ್ ಮತ್ತಿತರರು ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.












Click it and Unblock the Notifications