ಮೈಸೂರು ಅಂಚೆ ಕಚೇರಿಗೆ ಹುಸಿ ಬಾಂಬ್ ಕರೆ
ಮೈಸೂರು, ಸೆ.26 : ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿರುವ ಪ್ರಧಾನ ಅಂಚೆ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಗುರುವಾರ ಬೆಳಗ್ಗೆ ಈ ಬೆದರಿಕೆ ಕರೆ ಬಂದಿದ್ದು, ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರೀಯದಳ ಆಗಮಿಸಿ ಬಾಂಬ್ ಗಾಗಿ ಹುಡುಕಾಟ ನಡೆಸಿವೆ. ಲಷ್ಕರ್ ಮೊಹಲ್ಲಾ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಗುರುವಾರ ಬೆಳಗ್ಗೆ ಲಷ್ಕರ್ ಮೊಹಲ್ಲಾ ಪೊಲೀಸ್ ಠಾಣೆ ಮತ್ತು ನೆಹರು ವೃತ್ತದಲ್ಲಿರುವ ಅಂಚೆ ಕಚೇರಿಗೆ ಫೋನ್ ಮಾಡಿದ ವ್ಯಕ್ತಿ. ಪ್ರಧಾನ ಅಂಚೆ ಕಚೇರಿಯಲ್ಲಿ ಬಾಂಬ್ ಇಡಲಾಗಿದ್ದು, ಬೆಳಗ್ಗೆ 11.30ಕ್ಕೆ ಅದು ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದಾನೆ. ತಕ್ಷಣ ಜಾಗೃತವಾದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬಾಂಬ್ ಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ಪ್ರಧಾನ ಅಂಚೆ ಕಚೇರಿಗೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರೀಯ ದಳದ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕಚೇರಿಯ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಶೋಧ ನಡೆಸಲಾಗುತ್ತಿದೆ.
ಕರೆ ಕಟ್ ಮಾಡಿದ : ಅಂಚೆ ಕಚೇರಿಗೆ ಫೋನ್ ಮಾಡಿದ ವ್ಯಕ್ತಿ, ನಿಮ್ಮ ಕಚೇರಿಯಲ್ಲಿ ಬಾಂಬ್ ಇಟ್ಟಿದ್ದೇನೆ. ಅದು 11.30ಕ್ಕೆ ಸ್ಫೋಟಗೊಳ್ಳಲಿದೆ ಎಂದು ಹೇಳಿದ. ನೀವು ಯಾರು? ಎಂದು ಕೇಳುತ್ತಿದ್ದಂತೆ ಕರೆ ಕಟ್ ಮಾಡಿದ ಎಂದು ಕಚೇರಿ ಸಿಬ್ಬಂದಿ ಹೇಳಿದ್ದಾರೆ.
ಹುಸಿ ಬಾಂಬ್ ಕರೆ : ಮೈಸೂರು ಪ್ರಧಾನ ಅಂಚೆ ಕಚೇರಿಗೆ ಬಂದಿದ್ದು ಹುಸಿ ಬಾಂಬ್ ಕರೆ ಎಂದು ನಗರ ಪೊಲೀಸ್ ಆಯುಕ್ತ ಸಲೀಂ ಹೇಳಿದ್ದಾರೆ. ದಸರಾ ಮಹೋತ್ಸವ ಹಿನ್ನಲೆಯಲ್ಲಿ ಕಿಡಿಗೇಡಿಗಳು ಇಂತಹ ಕರೆ ಮಾಡಿದ್ದಾರೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುವುದಾಗಿ ಅವರು ತಿಳಿಸಿದ್ದಾರೆ. ನಗರದ ಜನರು ಭಯ ಪಡಬೇಕಾಗಿಲ್ಲ, ಇದೊಂದು ಹುಸಿ ಕರೆ ಎಂದು ಅವರು ಮನವಿ ಮಾಡಿದ್ದಾರೆ.













Click it and Unblock the Notifications