ಕ್ಷೇತ್ರಕ್ಕೆ ಬರಲು ಬಾದಾಮಿ ಜನರಿಂದ ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್- ಜಮೀರ್ ಅಹ್ಮದ್
ಮೈಸೂರು, ಡಿಸೆಂಬರ್ 19: ಬಾದಾಮಿ ಕ್ಷೇತ್ರದಲ್ಲಿ 60 ವರ್ಷದಲ್ಲಿ ಆಗದಷ್ಟು ಅಭಿವೃದ್ಧಿ ಐದು ವರ್ಷದಲ್ಲಿ ಆಗಿದೆ. ಆದ್ದರಿಂದ ಸಿದ್ದರಾಮಯ್ಯ ನಮ್ಮ ಕ್ಷೇತ್ರದಲ್ಲೇ ಸ್ಪರ್ಧಿಸಬೇಕು ಎಂದು ಬಾದಾಮಿ ತಾಲೂಕಿನ ಜನ ಹೇಳುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕನಾದವನು 15 ದಿನಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಬರಬೇಕು. ನನಗೆ ಬರಲು ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರಿಂದಾಗಿ ಜನ ಹೆಲಿಕಾಪ್ಟರ್ ಕೊಡಿಸಲು ತೀರ್ಮಾನ ಮಾಡಿದ್ದಾರೆ. 25 ಕೋಟಿ ರೂಪಾಯಿ ಆಗಲಿ ಜನರೇ ದುಡ್ಡು ಹಾಕಿ ಹೆಲಿಕಾಪ್ಟರ್ ಕೊಡಿಸಬೇಕು ಎಂದುಕೊಂಡಿದ್ದಾರೆ. ಇದಕ್ಕಾಗಿ ಬಾದಾಮಿ ತಾಲೂಕಿನ ಜನ ಚಂದ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ
ಸುಮಾರು 24 ಮಂದಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ. ನಾನು ಸಹ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕ. ನನಗೂ ಆಪ್ತರು ಟಿಕೆಟ್ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ವಿಚಾರವನ್ನು ನಾನು ಸಹ ಹೈಕಮಾಂಡ್‌ಗೆ ತಿಳಿಸಿದ್ದೇನೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದರು.

ಬಾದಾಮಿಯಲ್ಲಿ ಜನ ಸಿದ್ದರಾಮಯ್ಯ ಅವರೇ ಬರಬೇಕು ಎನ್ನುತ್ತಿದ್ದಾರೆ
ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಮಾತನಾಡಿದ ಜಮೀರ್ ಅಹ್ಮದ್, 224 ಕ್ಷೇತ್ರದಿಂದಲೂ ಸಿದ್ದರಾಮಯ್ಯಗೆ ಒತ್ತಡವಿದೆ. ನಾನು ಸಹ ಚಾಮರಾಜಪೇಟೆಗೆ ಬನ್ನಿ ಎಂದು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡಬೇಕು ಅಂತಾ ಇನ್ನೂ ಸಿದ್ಧತೆ ನಡೆಸಿಲ್ಲ. ಬಾದಾಮಿಯಲ್ಲಿ ನಾನು ಸಹ ಪ್ರವಾಸ ಮಾಡಿ ಜನರ ಜೊತೆ ಮಾತನಾಡಿದ್ದೇನೆ. ಅಲ್ಲಿ ದಾರಿಯುದ್ದಕ್ಕೂ ಜನರು ಸಿದ್ದರಾಮಯ್ಯ ಅವರೇ ಬರಬೇಕು ಎನ್ನುತ್ತಿದ್ದಾರೆ. ನಮ್ಮ ಕ್ಷೇತ್ರ ನಾಲ್ಕು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಇಷ್ಟು ವರ್ಷದಲ್ಲಿ ಆಗದ ಅಭಿವೃದ್ಧಿ ನಾಲ್ಕು ವರ್ಷದಲ್ಲಿ ಆಗಿದೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ತನ್ವೀರ್ ಸೇಠ್ಗೆ ಜಮೀರ್ ಅಹ್ಮದ್ ಟಾಂಗ್
ಮಾತು ಮುಂದುವರಿಸಿದ ಅವರು, ಹೈಕಮಾಂಡ್ ಹೇಳಿದರೆ ನಾನು ಎನ್.ಆರ್.ಕ್ಷೇತ್ರದಲ್ಲಿ ಸ್ವರ್ಧೆ ಮಾಡಲೇಬೇಕು ಎನ್ನುವ ಮೂಲಕ ಪರೋಕ್ಷವಾಗಿ ಶಾಸಕ ತನ್ವೀರ್ ಸೇಠ್ಗೆ ಜಮೀರ್ ಅಹ್ಮದ್ ಟಾಂಗ್ ನೀಡಿದರು. ನಾನು ಈಗ ಚಾಮರಾಜಪೇಟೆ ಶಾಸಕ. ಮುಂದಿನ ಚುನಾವಣೆಯಲ್ಲಿ ಹೈಕಮಾಂಡ್ ಇಲ್ಲಿ ಸ್ಪರ್ಧೆ ಬೇಡ ಎಂದರೆ ನಾನು ಏನು ಮಾಡಲು ಆಗಲ್ಲ. ಒಂದು ವೇಳೆ ಮೈಸೂರಿನ ಎನ್.ಆರ್.ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಅಂದರೆ ನಾನು ಸ್ಪರ್ಧೆ ಮಾಡಲೇಬೇಕು ಎಂದು ತಿಳಿಸಿದರು.

ಜೆಡಿಎಸ್‌ಗೆ 18, 20, 23 ಸ್ಥಾನ ಬರುತ್ತದೆ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಸ್ಲಿಂ ಮುಖ್ಯಮಂತ್ರಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮುಸಲ್ಮಾನರನ್ನೇ ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಬೇಕು. ಅವರಿಗೆ ಮುಸ್ಲಿಂ ಮೇಲೆ ಪ್ರೀತಿ ಇದ್ದರೆ ಸಿ.ಎಂ.ಇಬ್ರಾಹಿಂ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ. ಜೆಡಿಎಸ್‌ಗೆ 18, 20, 23 ಸ್ಥಾನ ಬರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಗೆ 100 ಸೀಟ್ ಬರಲು ಆಗಲ್ಲ. ಮುಸ್ಲಿಂ ಮತಗಳನ್ನು ಸೆಳಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಜೆಡಿಎಸ್ ವಿರುದ್ಧ ಲೇವಡಿ ಮಾಡಿದರು.












Click it and Unblock the Notifications