ಮೈಸೂರು: ಬಹುನಿರೀಕ್ಷಿತ 'ಕಲ್ಪವೃಕ್ಷ' ಕ್ಯಾಂಟೀನ್ ಗೆ ಚಾಲನೆ
ಮೈಸೂರು, ಮೇ 26: ಪೋಲಿಸ್ ಕ್ಯಾಂಟೀನ್, ಮೆಡಿಕಲ್, ಹಾಪ್ ಕಾಮ್ಸ್, ದಿನಸಿ ಅಂಗಡಿ ಮತ್ತು ಬೇಕರಿಯನ್ನು ಡಿಎಆರ್ ಸಮುಚ್ಛಯದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯನ್ನು ಉದ್ಘಾಟನೆಯನ್ನು ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ನೆರವೇರಿಸಿದರು.
ಈ ಸಂದರ್ಭ ಪೋಲಿಸ್ ಆಯುಕ್ತ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್, ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್, ಹಾಗೂ ಡಿಸಿಪಿಗಳಾದ ಎಚ್ ಟಿ ಶೇಖರ್, ರುದ್ರಮುನಿ, ಅಪರ ಎಸ್ ಪಿ ಕಲಾಕೃಷ್ಣಸ್ವಾಮಿ ಸೇರಿದಂತೆ ಇನ್ನಿತರೆ ಪೋಲಿಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.[ಮೈಸೂರು- ಹುಬ್ಬಳ್ಳಿ ಎಕ್ಸ್ ಪ್ರೆಸ್ ನೂತನ ರೈಲ್ವೆಗೆ ಹಸಿರು ನಿಶಾನೆ]
ಜ್ಯೋತಿ ನಗರದಲ್ಲಿರುವ ಡಿಎಎಆರ್ ಆವರಣದಲ್ಲಿ ರಿಯಾಯಿತಿ ದರದಲ್ಲಿ ಆರಕ್ಷಕ ಕಲ್ಪವೃಕ್ಷ ಕ್ಯಾಂಟೀನ್ , ಬೇಕರಿ, ಹಾಪ್ ಕಾಮ್ಸ್, ದಿನಸಿ ಅಂಗಡಿ ಮತ್ತು ಮೆಡಿಕಲ್ ಸ್ಟೋರ್ಸ್ ಮತ್ತು ಶುದ್ಧನೀರಿನ ಘಟಕ ನಿರ್ಮಾಣಗೊಂಡಿದೆ.

ಸಾರ್ವಜನಿಕರಿಗೆ ಹೊಸ ಅನುಕೂಲ
ಇದೇ ವೇಳೆ, ಮೈಸೂರು ಜಿಲ್ಲಾ ಪೊಲೀಸ್ ಘಟಕದಿಂದ ನೂತನವಾಗಿ ಅಭಿವೃದ್ಧಿಪಡಿಸಿರುವ ವೆಬ್‌ಸೈಟ್ ಗೆ (www.mysurudistrictpolice.gov.in ) ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಚಾಲನೆ ನೀಡಿದರು.
ಡಿಎಆರ್ ಸಮುಚ್ಛಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸರ ವೆಬ್‌ಸೈಟ್‌ನ್ನು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳಿಸಿದರು.

ದೂರು ಹೆಚ್ಚಾಗಿದ್ದರಿಂದ ಕ್ರಮ
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಜ್ಞಾವಂತ ನಾಗರಿಕರಲ್ಲಿ ಹೆಚ್ಚಿನ ತಿಳುವಳಿಕೆ ಮೂಡಿಸುವ ಹಾಗೂ ಸಾಮಾಜಿಕ ಜಾಲತಾಣಗಳ ಉಪಯೋಗವೂ ಹೆಚ್ಚಿಸರುವುದರಿಂದ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ದೂರುಗಳು ಹೆಚ್ಚಿದ್ದು ಇದನ್ನು ಮನಗೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ನೇತೃತ್ವದಲ್ಲಿ ನೂತನವಾಗಿ ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗಿದೆ.

ಆನ್ ಲೈನ್ ನಲ್ಲೇ ಕಂಪ್ಲೇಟ್ ನೀಡಬಹುದು
ವೆಬ್ ಸೈಟ್ ತನ್ನದೇ ಆದ ವಿಶೇಷತೆ ಇದೆ. ಇದರ ಸಹಾಯದಿಂದ ಕಳೆದುಕೊಂಡ ಸ್ವತ್ತಿನ ಬಗ್ಗೆ ಆನ್ ಲೈನ್ ನಲ್ಲಿ ದೂರು ನೀಡಿ ಸ್ವೀಕೃತಿ ಪಡೆಯಬಹುದು. ಸಾರ್ವಜನಿಕರು ಈಗಾಗಲೇ ಪೊಲೀಸ್ ಠಾಣೆಗಳಲ್ಲಿ ತಾವು ಕಳೆದುಕೊಂಡ ಸ್ವತ್ತುಗಳ ಬಗ್ಗೆ ದೂರು ನೀಡುತ್ತಿದ್ದು ಅದಕ್ಕಾಗಿ ಪೊಲೀಸ್ ಠಾಣೆಯಿಂದ ಸ್ವೀಕೃತಿ ಸಹ ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ವೆಬ್ ಸೈಟ್ ಗೆ ಭೇಟಿ ನೀಡಿ, ಕಂಪ್ಲೇಂಟ್ಸ್ ವಿಭಾಗದ ಮೇಲೆ ಕ್ಲಿಕ್ಕಿಸಿ ದೂರು ದಾಖಲಿಸಬಹುದು. ಅಲ್ಲದೆ, ಸ್ವೀಕೃತಿ ಸಹ ಕ್ಷಣದಲ್ಲಿ ಪಡೆಯಬಹುದು. ಈ ಬಗ್ಗೆ ದೂರುದಾರರಿಗೆ ಇ ಮೇಲ್ ಗೆ ಸಂದೇಶ ಸಹ ರವಾನೆಯಾಗಲಿದೆ.

ಖಾತೆ ತೆರೆದ ನಂತರವೇ ದೂರು ಸಲ್ಲಿಸಬೇಕಿದೆ
ದೂರು ದಾಖಲಿಸುವ ಮುನ್ನ ತಮ್ಮ ಹೆಸರು ಮುಂತಾದ ವಿವರಗಳನ್ನು ರಿಜಿಸ್ಟರ್ ಮಾಡುವ ಈ ವೆಬ್ ಸೈಟ್ ನಲ್ಲಿ ತಮ್ಮದೇ ಆದ ಒಂದು ಅಕೌಂಟ್ ತೆರೆಯಬೇಕಿದೆ. ಹಾಗಾಗಿ, ಪ್ರತಿ ಬಾರಿ ದೂರು ಸಲ್ಲಿಸುವಾಗಲೂ ನಾಗರಿಕರು ರಿಜಿಸ್ಟರ್ ವೇಳೆ ನೀಡಲಾಗಿದ್ದ ಲಾಗಿನ್ ಹೆಸರು ಹಾಗೂ ಪಾಸ್ ವರ್ಡ್ ಗಳನ್ನು ಉಪಯೋಗಿಸಿ ತಮ್ಮ ಖಾತೆಗೆ ಭೇಟಿ ನೀಡಿ, ಅಲ್ಲಿಂದ ದೂರು ಸಲ್ಲಿಸಬೇಕಿದೆ.

ಕ್ಷಿಪ್ರವಾಗಿ ದೂರು ದಾಖಲಿಸಲು ಅನುಕೂಲ
ಸಂಚಾರ ನಿಯಮ ಉಲ್ಲಂಘನೆ, ಅಪರಾಧ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ಸಾರ್ವಜನಿಕರು ಸುಲಭವಾಗಿ ದೂರು ಸಲ್ಲಿಸಲು ಹಾಗೂ ನಾಗರೀಕರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ವೆಬ್ ಸೈಟ್ ಬಿಡುಗಡೆ ಮಾಡಲಾಗಿದೆ.












Click it and Unblock the Notifications