ಮೈಸೂರು ಮೃಗಾಲಯದಲ್ಲಿ ದುರಂತ: ಮಾವುತನನ್ನು ಕೊಂದ ಆನೆ
ಮೈಸೂರು, ಆ. 07: ವಿಶ್ವವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ತನ್ನನ್ನು ನೋಡಿಕೊಳ್ಳುವ ಮಾವುತನನ್ನೇ ತುಳಿದು ಸಾಯಿಸಿರುವ ಘಟನೆ ಶುಕ್ರವಾರ (ಆ. 07) ರಾತ್ರಿ ಸಂಭವಿಸಿದೆ.
ಹರೀಶ್ ಎಂಬ ಮಾವುತ ತಾನು ಸಲಹುತ್ತಿದ್ದ ಆನೆ ದಾಳಿಯಿಂದಲೇ ದುರಂತ ಸಾವನ್ನಪ್ಪಿದ್ದಾರೆ. ಕಳೆದ ಐದು ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ಇವತ್ತು ಕೆಲಸಕ್ಕೆ ಹಾಜರಾಗಿದ್ದರು. ಎಂದಿನಂತೆ ಆನೆಯ ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ಆತನನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ಹೊಸಕಿದೆ.
ಇದರಿಂದ ತಬ್ಬಿಬ್ಬಾದ ಇತರೆ ಸಿಬ್ಬಂದಿ ಕೂಡಲೇ ಹರೀಶನನ್ನು ಆನೆಯಿಂದ ಬಿಡಿಸಿಕೊಂಡು ತಕ್ಷಣವೇ ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರಾದರೂ ಫಲಕಾರಿಯಾಗದೆ ಹರೀಶ್ ಸಾವನ್ನಪ್ಪಿದರು ಎಂದು ಮೃಗಾಲಯದ ಮೂಲಗಳು ತಿಳಿಸಿವೆ. ಪ್ರಕರಣ ಕುರಿತು ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾನ್ಯವಾಗಿ ಮಾವುತನನ್ನು ಆನೆ ಬಹಳ ಪ್ರೀತಿಯಿಂದ ನೋಡುತ್ತದೆ. ಜೊತೆಗೆ ಆನೆಗೆ ಮದ ಬಂದಾಗ ಮಾತ್ರ ಈ ರೀತಿ ದಾಳಿಗೆ ಆನೆ ಮುಂದಾಗುತ್ತದೆ. ಆದರೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ಕೊಡುವ ಮೈಸೂರು ಮೃಗಾಲಯದಲ್ಲಿ ಘಟನೆ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಘಟನೆ ಬಗ್ಗೆ ಮೃಗಾಲಯದ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.












Click it and Unblock the Notifications