ಆನ್ ಲೈನ್ ಗ್ರಾಹಕರೇ ಹುಷಾರು: ಮೈಸೂರಿನಲ್ಲಿ ಮೊಬೈಲ್ ಬದಲು ಬಂತು ಕಲ್ಲು!
ಮೈಸೂರು ಮಾರ್ಚ್ 9: ಆನ್ ಲೈನ್ ನಲ್ಲಿ ಶಾಪಿಂಗ್ ಮಾಡ್ತೀರಾ? ಪದೇ ಪದೇ ವಸ್ತುಗಳನ್ನು ಆನ್ ಲೈನ್ ನಲ್ಲಿ ಖರೀದಿಸುತ್ತಿದ್ದೀರಾ? ಹಾಗಾದ್ರೆ ಎಚ್ಚರ ಗ್ರಾಹಕರೇ! ಉಂಡೆನಾಮ ಇಡೋಕೆ ಕೆಲವು ಕಂಪನಿಗಳು ಸಿದ್ಧವಾಗಿವೆ! ಸ್ವಲ್ಪ ಯಾಮಾರಿದರೂ ಶ್ರಮವಹಿಸಿ ದುಡಿದ ಸಾವಿರಾರು ರೂಪಾಯಿಗಳು ವಂಚಕರ ಜೇಬು ಸೇರುತ್ತೆ ಹುಷಾರ್.. ಇದ್ಯಾಕೆ ಈ ವಿಚಾರ ಅಂತೀರಾ?
ಮೈಸೂರಿನ ಇಲವಾಲದ ನಿವಾಸಿ ಜಯಕುಮಾರ್ ಅವರ ಅನುಭವ ಹೇಗಿದೆ ನೋಡಿ. ದುಬಾರಿ ಮೊಬೈಲ್ ಖರೀದಿಸಲು ಆನ್ ಲೈನ್ ಮೊರೆ ಹೋದ ಇವರಿಗೆ ಆಗಿದ್ದು ಕಹಿ ಅನುಭವ.[ಗಣೇಶನ ಚಿತ್ರವಿರುವ ಸ್ಕೇಟಿಂಗ್ ಬೋರ್ಡ್ ಮಾರುತ್ತಿರುವ ಅಮೆಜಾನ್!]

ಆರ್‍ಎಂಪಿ ಕ್ವಾಟ್ರಸ್ ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿತ್ತಿರುವ ಜಯಕುಮಾರ್, ಫೆಬ್ರವರಿ 28 ರಂದು ಅಮೆಜಾನ್ ಕಂಪನಿಯಲ್ಲಿ ದುಬಾರಿ ಮೊಬೈಲ್ ಬುಕ್ ಮಾಡಿದ್ದಾರೆ. ಪ್ರತಿಷ್ಠಿತ ಕಂಪನಿ ಎಂದು ಬುಕ್ ಮಾಡಿದ ಜಯಕುಮಾರ್, ಸ್ವಲ್ಪ ಯಾಮಾರಿದ್ರೆ 18,500 ಸಾವಿರ ಕಳೆದುಕೊಳ್ಳಬೇಕಿತ್ತು.
ಮಾರ್ಚ್ ೪ನೇ ತಾರೀಕು ಮೊಬೈಲ್ ಮನೆ ವಿಳಾಸ ಹುಡುಕಿಕೊಂಡು ಬಂದಿದೆ. ತಮ್ಮ ಪತ್ನಿಗೆ ಪರಿಶೀಲಿಸಿ ಹಣ ನೀಡುವಂತೆ ಸಲಹೆಗಳನ್ನು ಕೊಟ್ಟಿದ್ರು. ಗಂಡನ ಸಲಹೆಯಂತೆ ಡೆಲಿವರಿ ಬಾಯ್ ಗೆ ಹಣ ನೀಡುವ ಮುನ್ನ ಪಾರ್ಸಲ್ ಓಪನ್ ಮಾಡಿ ನೋಡಿದ್ರೆ ಅಚ್ಚರಿ ಆಯ್ತು. ಮೊಬೈಲ್ ಬದಲಾಗಿ ಪಾರ್ಸಲ್ ನಲ್ಲಿ ಕಪ್ಪು ಬಣ್ಣದ ಕಲ್ಲು ಇತ್ತು. ಕೂಡಲೇ ಡೆಲಿವರಿ ಬಾಯ್ ಗೆ ಪ್ರಶ್ನಿಸಿದರೆ ಸಮಂಜಸ ಉತ್ತರ ಕೊಟ್ಟಿಲ್ಲ. ಒಂದು ವೇಳೆಗೆ ಹಣ ಕೊಟ್ಟು ಪಾರ್ಸಲ್ ಪಡಕೊಂಡಿದ್ರೆ 18,500 ರೂಪಾಯಿಗಳಿಗೆ ಪಂಗನಾಮ ಬೀಳುತ್ತಿತ್ತು. ಮುಂಜಾಗ್ರತೆ ವಹಿಸಿ ಪರಿಶೀಲಿಸಿದ್ದರಿಂದ ಜಯಕುಮಾರ್ ಬಚಾವ್ ಆಗಿದ್ದಾರೆ.[ಅಮೆಜಾನ್ ವಿರುದ್ಧ ಸುಷ್ಮಾ ಸ್ವರಾಜ್ ಕೆಂಡಾಮಂಡಲ]
ಪ್ರತಿಷ್ಠಿತ ಕಂಪನಿಗಳೇ ಹೀಗೆ ವಂಚನೆ ಮಾಡಿದ್ರೆ ಹೇಗೆ ಎನ್ನುವ ಜಯಕುಮಾರ್ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ.
ಈ ಪ್ರಕರಣದಿಂದ ಆನ್ ಲೈನ್ ವ್ಯವಹಾರ ಸುರಕ್ಷಿತವಲ್ಲ ಎಂಬುದು ಖಾತ್ರಿಯಾಗಿದೆ. ಹಾಗಿದ್ದೂ ವ್ಯವಹಾರ ಮಾಡಲೇಬೇಕು ಎಂದೆನಿಸಿದರೆ. ಜಯಕುಮಾರ್ ಅವರು ತೆಗೆದುಕೊಂಡಂತೆ ಮುಂಜಾಗ್ರತೆ ವಹಿಸಿ, ಪಂಗನಾಮದಿಂದ ಪಾರಾಗಿ.












Click it and Unblock the Notifications