ರಾಜ್ಯಸಭಾ ಚುನಾವಣೆ: ಮತ ಚಲಾಯಿಸಲು ಮಲಿಕ್, ದೇಶಮುಖ್‌ಗೆ ಜಾಮೀನು ನಿರಾಕರಣೆ
ಮುಂಬೈ ಜೂನ್ 9: ನಾಳೆ(ಜೂನ್ 10) ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅನುವಾಗುವಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮತ್ತು ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ ತಾತ್ಕಾಲಿಕವಾಗಿ ಒಂದು ದಿನದ ಮಟ್ಟಿಗೆ ಜಾಮೀನು ನೀಡಲು ಮುಂಬೈ ವಿಶೇಷ ನ್ಯಾಯಾಲಯ ಗುರುವಾರ ನಿರಾಕರಿಸಿದೆ.
ಬಧುವಾರ ನಡೆದ ವಿಚಾರಣೆ ವೇಳೆ ಎರಡು ಕಡೆಗಳ ವಕೀಲರ ವಾದ ಮತ್ತು ಜಾರಿ ನಿರ್ದೇಶನಾಲಯ (ಇಡಿ)ದ ವಾದವನ್ನು ಆಲಿಸಿ, ವಿಶೇಷ ನ್ಯಾಯಾಧೀಶ ಆರ್.ಎಸ್.ರೋಕಡೆ ಅವರು ಈ ಆದೇಶವನ್ನು ನೀಡಿದ್ದಾರೆ.
ಕೈದಿಗಳಿಗೆ ಜನತಾ ಪ್ರಾತಿನಿಧ್ಯ ಕಾಯಿದೆಯಡಿಯಲ್ಲಿ ಮತದಾನದ ಹಕ್ಕುಗಳಿಲ್ಲ ಎಂದು ಜಾರಿ ನಿರ್ದೇಶನಾಲಯ ವಿರೋಧ ವ್ಯಕ್ತಪಡಿಸಿತ್ತು.
"ಸಚಿವ ನವಾಬ್ ಮಲಿಕ್ ಅವರು ವಿಧಾನಸಭೆಗೆ ಹಾಜರಾಗಲು ಶಾಶ್ವತವಾಗಿ ಅನುಮತಿ ಕೋರುತ್ತಿಲ್ಲ. ಆದರೆ ಪೊಲೀಸ್ ಬೆಂಗಾವಲುಗಳೊಂದಿಗೆ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿಯನ್ನು ಮಾತ್ರ ಬಯಸಿದ್ದರು. ಮಲಿಕ್ ತನ್ನ ಕ್ಷೇತ್ರದ ಜವಾಬ್ದಾರಿಯನ್ನು ಹೊಂದಿದ್ದಾರೆ,'' ಎಂದು ನವಾಬ್ ಮಲಿಕ್ ಪರ ಹಿರಿಯ ವಕೀಲರಾದ ಅಮಿತ್ ದೇಸಾಯಿ ಬುಧವಾರದ ವಿಚಾರಣೆ ವೇಳೆ ವಾದಿಸಿದ್ದರು.

ಮತ ಚಲಾಯಿಸಲು ಅವಕಾಶ ನಿರಾಕರಣೆ
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಒಂದು ದಿನದ ಜಾಮೀನು ಕೋರಿ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಮುಂಬೈ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದರು. ಅಕ್ರಮ ಹಣ ವರ್ಗಾವಣೆಯ ಪ್ರತ್ಯೇಕ ಪ್ರಕರಣಗಳಲ್ಲಿ ಎನ್ ಸಿಪಿ ನಾಯಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅನಿಲ್ ದೇಶಮುಖ್ ಅವರು ಆರ್ಥುರ್ ರೋಡ್ ಜೈಲಿನಲ್ಲಿದ್ದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ನವಾಬ್ ಮಲಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭೂಗತ ಜಗತ್ತಿನೊಂದಿಗೆ ನಂಟು
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಬ್ ಮಲಿಕ್ ಅವರನ್ನು ಫೆಬ್ರವರಿ 23ರಂದು ಇಡಿ ಅಧಿಕಾರಿಗಳು ಬಂಧಿಸಿದ್ದರು. 1993 ರ ಬಾಂಬೆ ಸ್ಫೋಟದ ಅಪರಾಧಿಗಳಾದ ಸರ್ದಾರ್ ಶಾವಾಲಿ ಖಾನ್ ಮತ್ತು ದಿವಂಗತ ಹಸೀನಾ ಪಾರ್ಕರ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರಾದ ಮೊಹಮ್ಮದ್ ಸಲೀಂ, ಇಶಾಕ್ ಪಟೇಲ್ ಅವರೊಂದಿಗೆ ನವಾಬ್ ಮಲಿಕ್ ಆಸ್ತಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಇಬ್ರಾಹಿಂ ಸೋದರಿ ಹಸೀನಾ ಪಾರ್ಕರ್, ಸಂಬಂಧಿಕರು ಹಾಗೂ ಆಪ್ತರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೇ ದಾವೂದ್ ಸೋದರ ಇಕ್ಬಾಲ್ ಕಸ್ಕರ್‌ನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ದಾವೂದ್ ಸಂಬಂಧಿಕರಿಂದ ಆಸ್ತಿ ಖರೀದಿ
ದಾವೂದ್ ಇಬ್ರಾಹಿಂನ ಡಿ-ಕಂಪನಿಯೊಂದಿಗೆ ನವಾಬ್ ಮಲಿಕ್ ದೀರ್ಘಕಾಲದ ಸಂಪರ್ಕ ಹೊಂದಿದ್ದಾರೆ. 1996 ರಲ್ಲಿ ಕುರ್ಲಾ ವೆಸ್ಟ್‌ನಲ್ಲಿರುವ ಗೋವಾಲಾ ಕಟ್ಟಡದ ಕಾಂಪೌಂಡ್ ಅನ್ನು ಆಕ್ರಮಿಸಿಕೊಳ್ಳಲು ಡಿ-ಕಂಪನಿ ಪಿತೂರಿ ನಡೆಸಿದೆ. ದಾವೂದ್ ಸಂಬಂಧಿಕರಾದ ಹಸೀನಾ ಪರ್ಕರ್ ಮತ್ತು ಸಲೀಂ ಪಟೇಲ್ ಗೋವಾಲಾ ಬಿಲ್ಡಿಂಗ್‌ನ ವಿವಾದವನ್ನು ಬಗೆಹರಿಸಿದ್ದಾರೆ ಮತ್ತು ಅಲ್ಲಿ ಕಚೇರಿಯನ್ನು ತೆರೆಯುವ ಮೂಲಕ ಕಾಂಪೌಂಡ್‌ನ ಭಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಹಸೀನಾ ಪಾರ್ಕರ್ ತನ್ನ ನಿಯಂತ್ರಣದಲ್ಲಿರುವ ಗೋವಾಲಾ ಕಟ್ಟಡದ ಒಂದು ಭಾಗವನ್ನು ನವಾಬ್ ಮಲಿಕ್ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ಇಡಿ ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

100 ಕೋಟಿ ರುಪಾಯಿ ವಸೂಲಿ ಆರೋಪ
ಪ್ರತಿ ತಿಂಗಳು 100 ಕೋಟಿ ರುಪಾಯಿ ವಸೂಲಿ ಮಾಡಿ ನೀಡುವಂತೆ ಕೆಲವು ಪೊಲೀಸ್ ಅಧಿಕಾರಿಗಳಿಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಆದೇಶಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು.
ಅಲ್ಲದೇ ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದ ಅವರು, 100 ಕೋಟಿ ಹಫ್ತಾ ವಸೂಲಿ ಮಾಡಲು ಇಲಾಖೆಗೆ ಸಚಿವ ಅನಿಲ್ ದೇಶ್ ಮುಖ್ ಅವರಿಂದ ಸೂಚನೆ ಬಂದಿತ್ತು ಎಂದು ಗಂಭೀರ ಆರೋಪ ಮಾಡಿದ್ದರು. ನಂತರ ಈ ಬಗ್ಗೆ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ದೇಶ್‌ಮುಖ್ ಅವರನ್ನು ಬಂಧಿಸಿತ್ತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications