ರೇಪ್ ಕೇಸ್: ಜೈಲಿನಿಂದ ಗಾಯಕ ಅಂಕಿತ್ ಹೊರಕ್ಕೆ
ಮುಂಬೈ, ಮೇ.23: ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಬಾಲಿವುಡ್ ಗಾಯಕ ಅಂಕಿತ್ ತಿವಾರಿಗೆ ಜಾಮೀನು ಮಂಜೂರಾಗಿದೆ. ಇಲ್ಲಿನ ಸೆಷನ್ಸ್ ನ್ಯಾಯಾಲಯವು ಗುರುವಾರ ಸಂಜೆ ಅಂಕಿತ್ ಷರತ್ತುಬದ್ಧ ಜಾಮೀನು ನೀಡಿದ್ದು, ಜೈಲಿನಿಂದ ಹೊರಬಂದಿದ್ದಾರೆ.
ಬಾಲಿವುಡ್ ಚಿತ್ರ 'ಆಶಿಕಿ 2' ಚಿತ್ರದಲ್ಲಿ "ಸುನ್ ರಹಾ ಹೈ ನಾ ತು.." ಎಂಬ ಹಾಡಿನ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ ಹಿನ್ನೆಲೆ ಗಾಯಕ, ಸಂಗೀತ ಸಂಯೋಜಕ ಅಂಕಿತ್ ತಿವಾರಿಯನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಅಂಕಿತ್ ಜೊತೆಗೆ ಅವರ ಸಹೋದರ ಅಂಕರ್ ಅವರನ್ನೂ ಜೈಲಿಗೆ ತಳ್ಳಲಾಗಿತ್ತು.

ಈ ಪ್ರಕರಣ ವಿಚಾರಣೆ ನಡೆದು ತಿವಾರಿಗೆ 20,000 ರು ವೈಯಕ್ತಿಕ ಬಾಂಡ್ ನೀಡಿ ನ್ಯಾ.ವಿಎಂ ಮೋಹಿತೆ ಅವರು ಜಾಮೀನು ನೀಡಿದ್ದಾರೆ. ಅಂಕಿತ್ ವಿರುದ್ಧ ಆರೋಪ ಹೊರೆಸಿರುವ ಆತನ ಗರ್ಲ್ ಫ್ರಂಡ್ ನೀಡಿರುವ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಸರಿಯಾದ ಸಾಕ್ಷಿ ಆಧಾರಗಳಿಲ್ಲದೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಅಂಕಿತ್ ಪರ ವಕೀಲರು ವಾದಿಸಿದ್ದರು.
24 ವರ್ಷ ವಯಸ್ಸಿನ ಅಂಕಿತ್ ಅವರನ್ನು ವರ್ಸೋವಾ ಪೊಲೀಸರು ಮೆ.8 ರಂದು ಬಂಧಿಸಿದ್ದರು, ಒಂದು ಕಾಲದ ಗೆಳತಿ ಜತೆ ದೈಹಿಕ ಸಂಬಂಧ ಹೊಂದಿದ್ದು, ನಂಬಿಸಿ ಕೈ ಕೊಟ್ಟ ಆರೋಪವನ್ನು ಅಂಕಿತ್ ಮೇಲೆ ಹಾಕಲಾಗಿತ್ತು.
ಅಕ್ಟೋಬರ್ 2013 ರಿಂದ ಡಿಸೆಂಬರ್ 2013 ರ ಅವಧಿಯಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ, ಅತ್ಯಾಚಾರ ನಡೆಸಲಾಗಿದೆ, ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಳು. ಅಂಕಿತ್ ಅವರ ಸೋದರ ಅಂಕುರ್ ಅವರು ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಳು. ಅಂಕಿತ್ ಮೇಲೆ ಐಪಿಸಿ ಸೆಕ್ಷನ್ 376, ೪೯೩, 506(2) ಅನ್ವಯ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು.












Click it and Unblock the Notifications