ಲೋಕ ಸಮರ: ಬಿಜೆಪಿ-ಶಿವಸೇನಾ ಮೈತ್ರಿ, ಅಮಿತ್ ಶಾ ಚಾಣಾಕ್ಷ ನಡೆ
ಮುಂಬೈ, ಫೆಬ್ರವರಿ 18: ಮಹಾರಾಷ್ಟ್ರದಲ್ಲಿ ಎನ್ಡಿಎ ಮಿತ್ರಪಕ್ಷಗಳಲ್ಲಿ ಭಾರಿ ಬಿರುಕು, ಬಿಜೆಪಿ ಶಿವಸೇನಾ ನಡುವೆ ಮೈತ್ರಿ ಇನ್ನಿಲ್ಲ ಎಂಬ ಸುದ್ದಿಗಳು ಹಲವು ಬಾರಿ ಕೇಳಿ ಬಂದಿತ್ತು. ಶಿವಸೇನಾ ಕೂಡಾ ಬಿಜೆಪಿ ವಿರೋಧಿ ಹೇಳಿಕೆಗಳ ಮೂಲಕ ಅಚ್ಚರಿ ಮೂಡಿಸಿತ್ತು.
ಆದರೆ, ಲೋಕ ಸಮರ ಹತ್ತಿರವಾಗುತ್ತಿದ್ದಂತೆ ಮತ್ತೊಮ್ಮೆ ಬಿಜೆಪಿ ಜತೆ ಮರಾಠಿ ನಾಯಕರು ಕೈ ಜೋಡಿಸಿದ್ದಾರೆ. ಇದೆಲ್ಲವೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಚಾಣಕ್ಷ ನಡೆಯ ಫಲವಾಗಿದೆ.
ಅಮಿತ್ ಶಾ ಹಾಗೂ ಉದ್ಧವ್ ಠಾಕ್ರೆ ಅವರು ಫೋನ್ ಮೂಲಕ ನಿರಂತರವಾಗಿ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಸಣ್ಣ ಪುಟ್ಟ ಬೇಡಿಕೆಗಳು, ಮುನಿಸು, ಮನಸ್ತಾಪವನ್ನು ಬದಿಗೊತ್ತಿ ಸಮರ್ಥ ದೇಶ ನಿರ್ಮಿಸುವತ್ತ ಹೆಜ್ಜೆ ಹಿಡಬೇಕಿದೆ. ಇದಕ್ಕೆ ನಿಮ್ಮ ಸಹಕಾರ ಬೇಕಿದೆ ಎಂದು ಉದ್ಧವ್ ಅವರ ಮನ ಓಲೈಕೆ ಮಾಡುವಲ್ಲಿ ಅಮಿತ್ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿಯಿದೆ.

ಜೈಪುರದಲ್ಲಿ ಪಕ್ಷದ ಸಭೆ ಮುಗಿಸಿಕೊಂಡು ಅಮಿತ್ ಶಾ ಅವರು ಮುಂಬೈಗೆ ತೆರಳಲಿದ್ದು, ಮಾತುಕತೆಗೆ ಅಂತಿಮ ರೂಪ ನೀಡಿ, ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಾಗೂ ಶಿವಸೇನಾ ಮೈತ್ರಿ ಬಗ್ಗೆ ಘೋಷಣೆಯಾಗಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಸೀಟು ಹಂಚಿಕೆ ಹೇಗೆ?: ಸದ್ಯದ ಮಾಹಿತಿಯಂತೆ 50:50 ರ ಅನುಪಾತದಂತೆ ಸೀಟು ಹಂಚಿಕೆಗೆ ಉಭಯ ಪಕ್ಷಗಳು ಒಪ್ಪಿಗೆ ಸೂಚಿಸಿವೆ. ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ಸ್ಥಾನ, ಬದಲಿ ಸಿಎಂ ವ್ಯವಸ್ಥೆ ಹೀಗೆ ವಿವಿಧ ರೀತಿ ಬೇಡಿಕೆಗಳು ಬಿಜೆಪಿ ಮುಂದಿವೆ. ಶಿವಸೇನಾಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಅಮಿತ್ ಶಾ ಒಪ್ಪಿದ್ದಾರೆ.
48 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹಿಡಿತದಲ್ಲಿರುವ ಪಲ್ಘಾರ್(ಮೀಸಲು) ಕ್ಷೇತ್ರ ಬಿಟ್ಟುಕೊಡುವಂತೆ ಶಿವಸೇನಾ ಬೇಡಿಕೆ ಇಟ್ಟಿದೆ. ಕಳೆದ ಬಾರಿಗೆ ಶಿವಸೇನಾಗೆ 22 ಕ್ಷೇತ್ರಗಳು ದಕ್ಕಿತ್ತು. ಈ ಬಾರಿ ಇನ್ನು ಹೆಚ್ಚಿನ ಕ್ಷೇತ್ರಗಳು ಲಭಿಸುವ ಸಾಧ್ಯತೆಯಿದೆ.












Click it and Unblock the Notifications