Story Of Sowjanya: ತೆರೆ ಮೇಲೆ ಬರಲಿದೆಯಾ ಸೌಜನ್ಯ ಕೊಲೆ ಕೇಸ್: ಟೈಟಲ್ ರಿಜಿಸ್ಟರ್ ಮಾಡಿದ ಚಿತ್ರತಂಡ
ಮಂಗಳೂರು, ಜುಲೈ 21: ಹನ್ನೊಂದು ವರ್ಷದ ಬಳಿ ಮತ್ತೆ ಸದ್ದು ಮಾಡುತ್ತಿರುವ ಧರ್ಮಸ್ಥಳ ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳ್ಳಿ ಪರದೆ ಮೇಲೆ ಬರಲು ಸಜ್ಜಾಗಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರದ ಟೈಟಲ್ ಬಗ್ಗೆ ರಿಜಿಸ್ಟರ್ ಮಾಡಲಾಗಿದೆ.
ವಿ.ಲವ ಅವರು ಈ ಚಿತ್ರದ ನಿರ್ದೇಶ ಮಾಡಲಿದ್ದು, ಜಿ.ಕೆ ವೆಂಚರ್ಸ್ ನಡಿಯಲ್ಲಿ ಚಿತ್ರ ನಿರ್ಮಾಣ ಆಗಲಿದೆ. ಸ್ಟೋರಿ ಆಫ್ ಸೌಜನ್ಯ ಹೆಸರಿನ ಟೈಟಲ್ ನಲ್ಲಿ ಚಿತ್ರ ನಿರ್ಮಾಣ ಆಗಲಿದೆ

ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಚಿತ್ರ ಇದಾಗಲಿದ್ದು, ಸದ್ಯ ಕೇವಲ ಹೆಸರು ನೋಂದಣಿಯಾಗಿದೆ. ಇನ್ನು ಚಿತ್ರತಂಡದಲ್ಲಿ ಯಾರು ಇರಲಿದ್ದಾರೆ ಎಂಬುವುದು ತಿಳಿದುಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳಬೇಕಿದೆ.
ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಆತ್ಯಾಚಾರ ಹಾಗೂ ಕೊಲೆ ಪ್ರಕರಣದ ತೀರ್ಪು ಇತ್ತೀಚಿಗೆ ಪ್ರಕಟವಾಗಿತ್ತು. ಪ್ರಕರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಆರೋಪಿ ಸಂತೋಷ್ ರಾವ್‌ನನ್ನು ದೋಷ ಮುಕ್ತ ಎಂದು ಆದೇಶ ಹೊರಡಿಸಿತ್ತು.
ಧರ್ಮಸ್ಥಳದ ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ 17 ವರ್ಷದ ಎರಡನೇ ಪುತ್ರಿ ಸೌಜನ್ಯ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಅಕ್ಟೋಬರ್ 9, 2012ರಂದು ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ದಾರಿ ಮಧ್ಯದ ಕಾಡಿನಲ್ಲಿ ಸೌಜನ್ಯಾಳ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಸಾಲು ಸಾಲು ಹೋರಾಟಗಳು ನಡೆದಿದ್ದವು.

ಈ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಕೊಲೆ ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆಗೊಳಿಸಲಾಗಿತ್ತು. ಹಲವು ಹೋರಾಟದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಹನ್ನೊಂದು ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಆದೇಶ ಹೊರಡಿಸಿತ್ತು.
ಸಂತೋಷ್ ರಾವ್ ಬಿಡುಗಡೆ ಬಳಿಕ ಪ್ರಕರಣ ಮತ್ತೆ ಮುಖ್ಯ ಭೂಮಿಕೆಗೆ ಬಂದಿದ್ದು, ಮತ್ತೆ ಜಸ್ಟೀಸ್ ಫಾರ್ ಸೌಜನ್ಯ(justice for sowjanya) ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಈ ಮೂಲಕ ಸಾರ್ವಜನಿಕರು ಈ ಪ್ರಕರಣದ ಮರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡುವಂತೆ ಆಗ್ರಹಿಸುತ್ತಿದ್ದಾರೆ.












Click it and Unblock the Notifications