ಮಂಗಳೂರಿನಲ್ಲಿ ಮಣ್ಣಿನ ಗಣಿಗಾರಿಕೆ ಅವ್ಯಾಹತ! ಮಿನಿ ಬಳ್ಳಾರಿ ಆಗಲಿದ್ಯಾ ಮಂಗಳೂರು
ಮಂಗಳೂರು, ಜೂನ್ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮರಳು ಮಾಫಿಯಾಕ್ಕೆ ಹೆಸರುವಾಸಿಯಾತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಣ್ಣು ಮತ್ತು ಕೆಂಪುಕಲ್ಲಿನ ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ. ಕೃಷಿಭೂಮಿ, ಕುಮ್ಕಿ ಜಮೀನು ಹೀಗೆ ಎಲ್ಲೆಂದರಲ್ಲಿ ಮಣ್ಣು ಅಗೆದು ಸಾಗಾಟ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.
ಜಿಲ್ಲೆಯ ಬಂಟ್ವಾಳ ತಾಲೂಕಿನ ಹಲವು ಕಡೆ ಇಂಥ ಮಣ್ಣು ಸಾಗಾಟದ ಪ್ರಕ್ರಿಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಂದ್ರಪ್ರದೇಶದಲ್ಲಿ ಈ ಮಣ್ಣಿಗೆ ಭಾರಿ ಬೇಡಿಕೆ ಇರುವ ಹಿನ್ನಲೆಯಲ್ಲಿ ಮಣ್ಣಿನ ವಹಿವಾಟು ಹೆಚ್ಚಾಗಲಾರಂಭಿಸಿದೆ. ಕೃಷಿಗಾಗಿ ಭೂಮಿಯನ್ನು ಸಮತಟ್ಟು ಮಾಡುವ ಉದ್ದೇಶಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದು ನಿರಂತರವಾಗಿ ದಂಧೆ ನಡೆಸುತ್ತಿರುವ ಹಲವು ನಿದರ್ಶನಗಳು ಜಿಲ್ಲೆಯಲ್ಲಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ವರ್ಗ ಭೂಮಿಯ ಜೊತೆಗೆ ಸರಕಾರಿ ಭೂಮಿಯನ್ನೂ ಸೇರಿಸಿಕೊಂಡು ಮಣ್ಣಿನ ವ್ಯವಹಾರ ಮಾಡಲಾಗುತ್ತಿದೆ. ಇವುಗಳಲ್ಲಿ ಕೆಲವು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿಯೊಂದಿಗೆ ನಡೆದರೆ, ಇನ್ನು ಹೆಚ್ಚಿನ ಕಡೆಗಳಲ್ಲಿ ಅಕ್ರಮವಾಗಿಯೇ ನಡೆಯುತ್ತಿದೆ. ಆಂದ್ರಪ್ರದೇಶ ಹಾಗೂ ಇತರ ಭಾಗದಲ್ಲಿ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಲವು ಕಡೆಗಳಲ್ಲಿ ಸಿಗುವಂತಹ ಕೆಂಪುಕಲ್ಲು ಮಿಶ್ರಿತ ಮಣ್ಣಿಗೆ ಭಾರೀ ಬೇಡಿಕೆ ಇರುವ ಕಾರಣಕ್ಕಾಗಿ ಈ ಭಾಗದಲ್ಲಿ ಎಲ್ಲೆಂದರಲ್ಲಿ ಗುಡ್ಡ ಪ್ರದೇಶಗಳನ್ನು ಕೊರೆದು ಮಣ್ಣು ಸಾಗಿಸಲಾಗುತ್ತಿದೆ.

ಪರಿಸರ ಪ್ರೇಮಿಗಳಲ್ಲಿ ಆತಂಕ
ಬರಡು ಭೂಮಿಯನ್ನು ಕೃಷಿ ಚಟುವಟಿಕೆ ಮಾಡುವ ಉದ್ಧೇಶದಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕ ಅತೀ ಸುಲಭವಾಗಿ ಮಣ್ಣು ಹಾಗೂ ಕಲ್ಲು ತೆಗೆಯಲು ಪರವಾನಗಿಯನ್ನು ಪಡೆಯುವ ದಂಧೆಕೋರರು, ಬಳಿಕ ಇದೇ ಪರವಾನಗಿಯ ಮೂಲಕ ಅಕ್ರಮವಾಗಿ ಮಣ್ಣನ್ನು ಹೊರ ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದಾರೆ. ಭೌಗೋಳಿಕವಾಗಿ ಕೊಂಚ ಭಿನ್ನವಾಗಿರುವ ಕರಾವಳಿಯಲ್ಲಿ ಈ ರೀತಿ ಗುಡ್ಡಗಳನ್ನು ಕೊರೆದು ಸಮತಟ್ಟು ಮಾಡುತ್ತಿರುವುದು ಕರಾವಳಿಯ ಭೌಗೋಳಿಕತೆಯ ಮೇಲೂ ಪರಿಣಾಮ ಬೀರಲಿದೆ ಎನ್ನುವ ಆತಂಕವನ್ನು ಪರಿಸರಪ್ರೇಮಿಗಳು ಹೊರಹಾಕುತ್ತಿದ್ದಾರೆ.

ಕಣ್ಣಿದ್ದು, ಕುರುಡಾದ ಪೊಲೀಸ್ ಇಲಾಖೆ
ಪೆರುವಾಯಿ, ಕನ್ಯಾನ ಮೊದಲಾದ ಕಡೆಗಳಲ್ಲಿ ಲೋಡ್ ಮಾಡಿದ ಮಣ್ಣನ್ನು ಈ ಲಾರಿಗಳು ವಿಟ್ಲ-ಕಲ್ಲಡ್ಕ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಸಾಗುತ್ತಿದ್ದು, ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಇಂಥಹ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಹೀಗಿದ್ದರೂ ಈ ಲಾರಿಗಳು ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದು, ಪೋಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎನ್ನುವುದು ಸ್ಥಳೀಯರಾದ ಮೊಯುದ್ದೀನ್ ಎಂಬುವವರ ಆರೋಪವಾಗಿದೆ.

ಸ್ಥಳೀಯರಿಗೆ ಜೀವಭಯ
ಇನ್ನೂ ದಿನಕ್ಕೆ ನೂರಾರು ಲಾರಿಗಳು ಈ ಮಣ್ಣುನ್ನು ತುಂಬಿಕೊಂಡು ನಿರತವಾಗಿದ್ದು ರಸ್ತೆಯಲ್ಲಿ ಹೋಗುವುದರಿಂದ ಸ್ಥಳೀಯ ಜನರು ಪ್ರಾಣಭಯದಿಂದಲೇ ರಸ್ತೆಯಲ್ಲಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಹಿಂದೆ ಮಣ್ಣು ಸಾಗಾಟದ ಲಾರಿಯೊಂದಕ್ಕೆ ಸಿಲುಕಿ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಸವಾರನೋರ್ವ ಮೃತಪಟ್ಟಿದ್ದಾನೆ. ಈ ಕಾರಣಕ್ಕಾಗಿ ಈ ಭಾರೀ ಗಾತ್ರದ ಲಾರಿಗಳಿಗೆ ಈ ಭಾಗದಲ್ಲಿ ಓಡಾಡಲು ಅವಕಾಶ ನೀಡಬಾರದೆಂದು ಪೋಲೀಸ್ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ ಹೀಗೆ ಎಲ್ಲಾ ಇಲಾಖೆಗಳಿಗೆ ಅಕ್ಕಪಕ್ಕದ ಊರಿನ ಜನರು ಮನವಿ ಮಾಡಿದ್ದಾರೆ.

ಬಳ್ಳಾರಿಯಂತಾಗುವತ್ತಾ ದ.ಕ ಜಿಲ್ಲೆ
ಈ ರೀತಿಯ ಮಣ್ಣು ಸಾಗಾಟದ ಜಮೀನುಗಳು ಬಂಟ್ವಾಳ ತಾಲೂಕಿನ ಮುಡಿಪು, ಇರಾ, ಕನ್ಯಾನ ಹೀಗೆ ಹಲವು ಕಡೆಗಳಲ್ಲಿ ಕಾರ್ಯಾಚರಿಸುತ್ತಿದ್ದು, ಜುಜುಬಿ ರಾಜಸ್ವವನ್ನು ಸಂಗ್ರಹಿಸಿ ಸರಕಾರ ಕೋಟಿಗಟ್ಟಲೆ ಮೌಲ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲು ಕಾನೂನಿನ ಮೂಲಕವೇ ಅವಕಾಶ ನೀಡಿದೆ. ಇದೇ ರೀತಿಯ ಪ್ರಕ್ರಿಯೆ ನಡೆದಲ್ಲಿ ಬಳ್ಳಾರಿಯಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಮಣ್ಣಿನ ಗಣಿಗಾರಿಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.












Click it and Unblock the Notifications