ಸಾಮಾನ್ಯರಂತೆ ದೇವಾಲಯದಲ್ಲಿ ಕುಳಿತು ಹೂ ಕಟ್ಟಿದ ಕೇಂದ್ರ ಸಚಿವರ ಪತ್ನಿ
ಮಂಗಳೂರು, ಸೆಪ್ಟೆಂಬರ್ 30: ರಾಜಕಾರಣಿಗಳ ಕುಟುಂಬಸ್ಥರು ಸೇರಿದಂತೆ ದೂರದ ಸಂಬಂಧಿಗಳು ಕೂಡ ಠಾಕು ಠೀಕು ಪ್ರದರ್ಶಿಸುವ , ದರ್ಪ ತೋರಿದ ಹಲವಾರು ಉದಾಹರಣೆಗಳು ನಮ್ಮಲ್ಲಿವೆ . ಆದರೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವವರ ಪತ್ನಿ ಜನಸಾಮಾನ್ಯರೊಂದಿಗೆ ದೇವಾಲಯದಲ್ಲಿ ನೆಲದಲ್ಲಿ ಕುಳಿತು ದೇವರಿಗಾಗಿ ಹೂ ಪೋಣಿಸಿದ ವಿದ್ಯಮಾನ ನಡೆದಿದೆ .
ಕೇಂದ್ರ ಸರಕಾರದ ಸಾಂಖ್ಯಿಕ ಮತ್ತು ಯೋಜನಾ ಖಾತೆ ಸಚಿವರಾಗಿರುವ ಡಿ.ವಿ. ಸದಾನಂದ ಗೌಡ ಅವರ ಪತ್ನಿ ಡಾಟಿ ಸದಾನಂದ ಗೌಡ ಅವರು ನವರಾತ್ರಿಯ ಅಂಗವಾಗಿ ಪುತ್ತೂರಿನ ಕೋಡಿಂಬಾಡಿ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ನವರಾತ್ರಿಯ ಅಂತಿಮ ದಿನವಾದ ಇಂದು ಶಕ್ತಿ ಸ್ವರೂಪಿಣಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಾಮಾನ್ಯ ಮಹಿಳೆಯರ ಜೊತೆ ನೆಲದಲ್ಲಿ ಕೂತೂ ಶ್ರೀ ದೇವಿಗೆ ಸಮರ್ಪಿಸಲ್ಪಡುವ ಹೂವು ಕಟ್ಟುವ ಮೂಲಕ ಎಲ್ಲರ ಗಮನ ಸೆಳೆದರು.

ಮಠಂತಬೆಟ್ಟು ದೇಗುಲ
ಕೋಡಿಂಬಾಡಿ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ.21ರಿಂದು ನವರಾತ್ರಿ ಉತ್ಸವ ನಡೆಯುತ್ತಿದೆ. ಇಂದು ಉತ್ಸವದ ಕೊನೆಯ ದಿನ. ನಿನ್ನೆ ಸಂಜೆಯೇ ದೇವಾಲಯಕ್ಕೆ ಆಗಮಿಸಿದ ಡಾಟಿ ಸದಾನಂದ ಗೌಡ ಅವರು ಅಲ್ಲಿನ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸರಳರಾಗಿ ಕಂಡ ಸಚಿವರ ಪತ್ನಿ
ಅತ್ಯಂತ ಸರಳ ಉಡುಗೆಯಲ್ಲಿ ಸಾಮನ್ಯರಲ್ಲಿ ಅತೀ ಸಾಮನ್ಯರಂತೆ ಕಂಡ ಡಾಟಿ ಅವರು ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಅಲ್ಲಿದ್ದ ಎಲ್ಲರ ಜೊತೆ ಬೆರೆತರು. ಅವರ ಎರಡು ದಿನದ ಭೇಟಿಯ ಸಂಧರ್ಭದಲ್ಲೂ ಯಾವುದೇ ಭದ್ರತಾ ಸಿಬ್ಬಂದಿಗಳು ಅವರ ಜೊತೆಗಿರಲಿಲ್ಲ.

ಕಾರ್ತಿಕ್ ರಿಂದ ತುಲಾಭಾರ ಸೇವೆ
ಇಂದು ಬೆಳಿಗ್ಗೆ ಡಿವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಮಠಂತಬೆಟ್ಟು ದೇವಾಸ್ಥಾನಕ್ಕೆ ಆಗಮಿಸಿ ಈ ಹಿಂದೆ ಹೇಳಿಕೊಂಡ ಹರಕೆಯಾದ ತುಲಾಭಾರ ಸೇವೆಯನ್ನು ದೇವಿ ಸಮ್ಮುಖ ತೀರಿಸಿದರು. ತನ್ನ ಮನ ಸಂಕಲ್ಪದಂತೆ ಅಕ್ಕಿ ಮತ್ತು ಬೆಲ್ಲದಲ್ಲಿ ತುಲಾ ಭಾರ ಸೇವೆ ನೆರೆವೇರಿಸಿದರು .

ಕಾರ್ತಿಕ್ ಗೌಡ ಜತೆಗೆ
ಈ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುವ ಸಮಯದಲ್ಲಿ ತಾಯಿ ಡಾಟಿ ಸದಾನಂದ ಗೌಡ ಅವರು ಕಾರ್ತಿಕ್ ಗೌಡ ಅವರ ಜೊತೆಗಿದ್ದರು.












Click it and Unblock the Notifications