ಚಂದ್ರಗ್ರಹಣ: ಶುಕ್ರವಾರ ಸಂಜೆಯ ನಂತರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನವಿಲ್ಲ
ಮಂಗಳೂರು, ಜುಲೈ.26: ಈ ವರ್ಷದ ಎರಡನೇ ಹಾಗೂ ಶತಮಾನದ ಅತಿ ದೊಡ್ಡ ಕೇತುಗ್ರಸ್ತ ಚಂದ್ರ ಗ್ರಹಣ ನಾಳೆ ಸಂಭವಿಸಲಿದೆ. ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂಬ ಕಾರಣಕ್ಕೆ ಈ ಗ್ರಹಣದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ನಾಳೆ ಚಂದ್ರ ಗ್ರಹಣ ಸಂಭವಿಸುತ್ತಿರುವುದರಿಂದ ದಕ್ಷಿಣಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿನ ಪೂಜಾ ವೇಳಾ ಪಟ್ಟಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಅದಲ್ಲದೆ, ದೇವರ ದರ್ಶನದ ಅವಧಿಯಲ್ಲೂ ತುಸು ವ್ಯತ್ಯಾಸ ಮಾಡಲಾಗಿದೆ.
ನಾಳೆ ಚಂದ್ರ ಗ್ರಹಣ ಸಂಭವಿಸಲಿರುವ ಹಿನ್ನೆಲೆಯಲ್ಲಿ ಸುಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನಾಳೆ 7 ಗಂಟೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ಹಗಲಿನಲ್ಲಿ ನಡೆಯುವ ಮಧ್ಯಾಹ್ನದ ಪೂಜೆ ಹಾಗೂ ಇತರ ಸೇವೆಗಳು ಎಂದಿನಂತೆ ನಿಗದಿತ ಸಮಯಕ್ಕೆ ನಡೆಯಲಿದ್ದು, ರಾತ್ರಿ ನಡೆಯುವ ಮಹಾ ಪೂಜೆ ಸಂಜೆ 6.30ಕ್ಕೆ ನೆರವೇರುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಅಲ್ಲದೆ ಸಂಜೆ ನಡೆಯುವ ಆಶ್ಲೇಷ ಬಲಿ ಸೇವೆ ಕೂಡ ಚಂದ್ರ ಗ್ರಹಣದ ಹಿನ್ನಲೆಯಲ್ಲಿ ಇರುವುದಿಲ್ಲ ಹಾಗೂ ರಾತ್ರಿ ದೇವಸ್ಥಾನದಲ್ಲಿ ನಡೆಯುವ ಅನ್ನಸಂತರ್ಪಣೆ ಕೂಡ ನಡೆಯುವುದಿಲ್ಲ ಎಂದು ದೇಗುಲದ ಮುಖ್ಯ ಕಾರ್ಯ ನಿರ್ವಣಾಧಿಕಾರಿ ರವೀಂದ್ರ ಎಂ. ಎಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೇತುಗ್ರಸ್ತಚಂದ್ರ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ದೇವಾಲಯದ ನಡೆಯುವ ವಿಧಿವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಎಂದಿನಂತೆ ನಾಳೆ ಶ್ರೀ ಕ್ಷೇತ್ರದಲ್ಲಿ ಧರ್ಮಸ್ಥಳದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿದೆ..ಅನ್ನ ಸಂತರ್ಪಣೆಯೂ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಜೆ 5:30 ರಿಂದ 7:30 ರವರೆಗೆ ದೇವಾಲಯದಲ್ಲಿ ಗ್ರಹಣ ಶಾಂತಿ ಹೋಮ ನಡೆಯಲಿದೆ. ಸಂಜೆ 7:30 ಕ್ಕೆ ಸರಿಯಾಗಿ ದೇವಾಲಯದ ಬಾಗಿಲು ಮುಚ್ಚಲಿದೆ. ಜುಲೈ28 ರಂದು ಮಂಜಾನೆ ದೇವಾಲಯವನ್ನು ಶುದ್ಧಗೊಳಿಸಿ ನಂತರ ಪೂಜೆ ನೆರವೇರಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.












Click it and Unblock the Notifications