ಹೊಸವರ್ಷಕ್ಕೆ ಅದ್ಭುತವಾಗಿ ಅಲಂಕಾರಗೊಂಡ ಶ್ರೀಕ್ಷೇತ್ರ ಧರ್ಮಸ್ಥಳ: ಭೂಲೋಕದ ಸ್ವರ್ಗ ಎಂದ ಭಕ್ತರು
ಮಂಗಳೂರು, ಜನವರಿ 01: ಹೊಸ ವರ್ಷಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಅದ್ಭುತವಾಗಿ ಸಿಂಗಾರಗೊಂಡಿದೆ. ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಾನ ಫಲ ಪುಷ್ಪಗಳಿಂದ ಅಲಂಕೃತವಾಗಿದೆ. ಬೆಂಗಳೂರಿನ ಉದ್ಯಮಿಗಳಾದ ಗೋಪಾಲರಾವ್ , ಆನಂದ್, ಶರವಣ ಅವರು ಕಳೆದ ಹದಿನೈದು ವರ್ಷಗಳಿಂದ ಹೊಸ ವರ್ಷದ ಮೊದಲ ದಿನದಂದು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ವಿಭಿನ್ನ ರೀತಿಯಲ್ಲಿ ಅಲಂಕಾರ ಮಾಡುತ್ತಿದ್ದು, ಈ ಬಾರಿಯೂ ಹೂವು, ಹಣ್ಣು ತರಕಾರಿಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಅಲಂಕಾರ ಮಾಡಿದ್ದಾರೆ.
ದೇವಸ್ಥಾನದ ಮುಂಭಾಗ, ಒಳಾಂಗಣ, ಗರ್ಭ ಗುಡಿಯ ಮುಂಭಾಗ, ಕಂಬಗಳು, ಹೆಗ್ಗಡೆಯವರ ನಿವಾಸ, ಅನ್ನಛತ್ರ ಹೀಗೆ ಕ್ಷೇತ್ರದ ಪ್ರಮುಖ ಸ್ಥಳಗಳನ್ನು ಅದ್ಭುತವಾಗಿ ಸಿಂಗರಿಸಲಾಗಿದೆ. ಈ ಅಲಂಕಾರಕ್ಕೆ ಸುಮಾರು ಹದಿನೈದು ಲೋಡ್‌ಗಿಂತ ಅಧಿಕ ಅಲಂಕೃತ ವಸ್ತುಗಳನ್ನು ಬಳಸಲಾಗಿದೆ. ಹಣ್ಣು, ಹಂಪಲು, ನಾನಾ ಬಗೆಯ ಪುಷ್ಪಗಳು ತರಕಾರಿ ಸೇರಿ ಐದು ಲೋಡ್ ಗಿಂತ ಹೆಚ್ಚಿನ ವಸ್ತುಗಳನ್ನು ಬಳಸಲಾಗಿದೆ.

ಬಾಳೆಗೊನೆ, ಸೇಬು, ತೆಂಗಿನಕಾಯಿ, ಅಡಿಕೆ, ಕಬ್ಬು, ಮರಗೆಣಸು, ಜೋಳ, ಬದನೆ ಇನ್ನಿತರ ವಸ್ತುಗಳನ್ನು ಬಳಸಿ ನೂರು ಮಂದಿಯ ತಂಡ ಕಳೆದ ಆರು ದಿನಗಳಿಂದ ದೇವಸ್ಥಾನವನ್ನು ಅಲಂಕಾರ ಮಾಡಿದ್ದಾರೆ. ನೈಸರ್ಗಿಕ ವಸ್ತುಗಳಿಗೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿರುವ ತಂಡ ಆಕರ್ಷಕ ವಾಗಿ ದೇಗುಲದ ಅಲಂಕಾರ ಮಾಡಿದ್ದಾರೆ.
ದೇವಸ್ಥಾನದ ಹೊರಭಾಗದ ಚಾವಣಿಯ ಮೇಲ್ಬಾಗದಲ್ಲಿ ನಂದಿ ವಾಹನದಲ್ಲಿ ಶಿವ-ಪಾರ್ವತಿ, ಸುತ್ತಾ ಶಿವಲಿಂಗಗಳ ಅಲಂಕಾರಕ್ಕೆ ಜೋಡಿಸಲಾಗಿದೆ. ದೇವಸ್ಥಾನದ ಹೊರಾಂಗಣ ಪ್ರವೇಶ ದ್ವಾರದಲ್ಲಿ ಆನೆಗಳ ಮುಖವರ್ಣಿಕೆಗಳನ್ನು ಬಳಸಲಾಗಿದೆ. ಆರ್ಕೀಡ್ ಪುಷ್ಪ, ರುದ್ರಾಕ್ಷಿ, ಗುಲಾಬಿ, ಸೇವಂತಿಗೆ, ಹಿಂಗಾರ, ಸುಗಂಧ ರಾಜ ಮೊದಲಾದ ಹೂವುಗಳನ್ನು ಅಲಂಕಾರಕ್ಕಾಗಿ ಬಳಸಲಾಗಿದೆ. ಹಸಿ ತೆಂಗಿನಗರಿಯ ತಟ್ಟಿಗಳ ಅಲಂಕಾರವನ್ನು ದೇಗುಲದ ಮುಂಭಾಗ ಮಾಡಲಾಗಿದ್ದು, ಕ್ಷೇತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಹೊಸವರ್ಷದ ದಿನವೇ ಸಾವಿರಾರು ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದು, ದೇವಾಲಯದ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಂಜುನಾಥ ಸ್ವಾಮಿ ದೇವಾಲಯವು ಭೂಲೋಕದ ಸ್ವರ್ಗದಂತೆ ಕಾಣುತ್ತಿದೆ ಎಂದು ಭಕ್ತರು ಖುಷಿ ಹಂಚಿಕೊಂಡಿದ್ದಾರೆ.
ಪಣಂಬೂರು ಬೀಚ್‌ನಲ್ಲಿ 2023ಕ್ಕೆ ವಿದಾಯ ಕೋರಿದ ಪ್ರವಾಸಿಗರು
ವರ್ಷದ ಕೊನೆಯ ದಿನ ಸೂರ್ಯಾಸ್ತವನ್ನು ಕಾಣುತ್ತಾ ಮಂಗಳೂರು ಪಣಂಬೂರು ಬೀಚ್ ನಲ್ಲಿ ಜನ 2023ಕ್ಕೆ ವಿದಾಯ ಕೋರಿದ್ದಾರೆ. ಮಂಗಳೂರು ನಗರದಲ್ಲಿ ಪ್ರವಾಸಿಗರ ದಂಡೇ ನೆರೆದಿದ್ದು, ಹೊಸವರ್ಷಾಚರಣೆಯ ಮುನ್ನ ಈ ವರ್ಷವನ್ನು ಬೀಳ್ಕೊಡಲು ಪಣಂಬೂರು ಕಡಲ ಕಿನಾರೆಗೆ ಪ್ರವಾಸಿಗರ ಗುಂಪೇ ಹರಿದುಬಂದಿದೆ. ಕಡಲ ಅಲೆಯಲ್ಲಿ ಆಟ ಆಡುತ್ತಾ ಸೂರ್ಯಾಸ್ತಮಾನ ಆಗಲು ಕಾದುಕುಳಿತಿದ್ದ ಜನರು, ಸೂರ್ಯ ಅಸ್ತಂಗತನಾಗುವ ಸುಳಿವು ನೀಡುತ್ತಿದ್ದಂತೆಯೇ ಸಂಭ್ರಮದಿಂದ ಕುಣಿದಾಡಿದ್ದಾರೆ. ಈ ವರ್ಷದ ನೋವು-ನಲಿವುಗಳನ್ನೆಲ್ಲಾ ಕಾಲಗರ್ಭದೊಳಗೆ ಸೇರಿಸಿ ಮುಂದಿನ ಹೊಸ ವರ್ಷ ಸಂತಸದ ದಿನಗಳ ಕನಸು ಕಾಣುತ್ತಾ ಕೇಕೆ ಹಾಕಿ ಸಂಭ್ರಮಿಸಿದ್ದಾರೆ.

ವರ್ಷಾಂತ್ಯದ ದಿನವಾದ ಆದಿತ್ಯವಾರ ಗರಿಷ್ಠ ಪ್ರಮಾಣದಲ್ಲಿ ಪ್ರವಾಸಿಗರು ಪಣಂಬೂರು ಬೀಚ್‌ನತ್ತ ಬಂದಿದ್ದಾರೆ. ಪಣಂಬೂರು ಬೀಚ್‌ನಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಸೇರಿದಂತೆ ಇತರ ಜಲಕ್ರೀಡೆಗಳಲ್ಲಿ ತೊಡಗಿಸಿದ ವರ್ಷದ ಕೊನೆಯ ದಿನವನ್ನು ಸಂಭ್ರಮದಿಂದ ಕಳೆದಿದ್ದಾರೆ. ಕೆಂಪೇರಿದ ಬಾನು, ಸಮುದ್ರದಲ್ಲಿ ಲೀನವಾದ ಸೂರ್ಯ ಎಲ್ಲವೂ ವರ್ಷದ ಕೊನೆಯ ದಿನದ ಕೊನೆಯ ಹಗಲಿಗೆ ಇತಿ ಶ್ರೀ ಹಾಡಿದೆ. ಈ ಮೂಲಕ ಹಳೆಯ ವರ್ಷ ನೆನಪಿನಂಗಳದಲ್ಲಿ ಜಾರಿದ ಬೇಸರದ ಜೊತೆಗೆ ಭರವಸೆ ಯ ಹೊಸವರ್ಷದ ಸ್ವಾಗತಕ್ಕಾಗಿ ಜನ ಮುಕ್ತ ಮನಸ್ಸಿನಿಂದ ವರ್ಷಾಂತ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಪಣಂಬೂರು ಬೀಚ್‌ನಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಜೊತೆಗೆ ಸಾಕಷ್ಟು ಜಲಕ್ರೀಡೆಗಳು ಬಂದಿದ್ದು, ಪ್ರವಾಸಿಗರು ಪಣಂಬೂರು ಬೀಚ್ ಅಭಿವೃದ್ಧಿ ಕಂಡು ಖುಷಿಯಾಗಿದ್ದಾರೆ. ಬೀಚ್‌ನಲ್ಲಿ ನೆರೆದ ಸಾವಿರಾರು ಜನ ಸೂರ್ಯಾಸ್ತವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ಸಮುದ್ರದಲ್ಲಿ ಲೀನವಾಗಲು ಹೊರಟ ಸೂರ್ಯನಿಗೆ ಕೊನೆಗೆ ಮೋಡ ಅಡ್ಡ ಬಂದಿದ್ದು, ಪೂರ್ಣ ಪ್ರಮಾಣದ ಸೂರ್ಯಾಸ್ತವನ್ನು ಕಾಣಲಾಗದೇ ಪ್ರವಾಸಿಗರು ನಿರಾಶೆಗೊಂಡಿದ್ದಾರೆ. ಆದರೂ ಬೀಚ್ ನಲ್ಲಿ ತನ್ಮಯರಾಗಿ ಜನ ಹೊರಗಿನ ಜಂಜಾಟವನ್ನು ಮೆರೆತು ಸಮಯ ಕಳೆದಿದ್ದಾರೆ.












Click it and Unblock the Notifications