300 ರೈತರು ತಡೆ ತಂದರೂ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಸಚಿವರು!
ಮಂಗಳೂರು, ಮಾರ್ಚ್ 16; ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 (13)ರ ಅಭಿವೃದ್ಧಿ ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ 300ಕ್ಕೂ ಅಧಿಕ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೂ ಮಂಗಳೂರಿನಲ್ಲಿ ಮಾರ್ಚ್ 1ರಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಹೆದ್ದಾರಿಗೆ ಶಂಕುಸ್ಥಾಪನೆ ಮಾಡಿದ್ದು, ಭೂ ಸಂತ್ರಸ್ತ ರೈತರನ್ನು ಆಕ್ರೋಶಿತರನ್ನಾಗಿ ಮಾಡಿದೆ.
ಈ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯೋಜನೆಗೆ ಭೂಮಿ ನೀಡಿದ ಸಂತ್ರಸ್ತನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲಂಚದ ಬೇಡಿಕೆ ಇಟ್ಟ ಅಧಿಕಾರಿಯ ದೂರವಾಣಿ ಕರೆಯನ್ನು ರೆಕಾರ್ಡ್ ಮಾಡಲಾಗಿದ್ದು, ಅದನ್ನು ಬಹಿರಂಗ ಮಾಡಿದ್ದಾರೆ.
ಈ ಬಗ್ಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಭೂ ಸಂತ್ರಸ್ತರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ಹೆದ್ದಾರಿಯ ಭೂಸ್ವಾಧೀನಕ್ಕೆ ತಮ್ಮದೇನು ತಕರಾರಿಲ್ಲ. ಆದರೆ, ಭೂಮಿ ನೀಡಿರುವ ಭೂ ಮಾಲೀಕರಿಗೆ ಅಧಿಕಾರಿಗಳಿಂದ ವಂಚನೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಅಧಿಕಾರಿಗಳಿಂದ ಭ್ರಷ್ಟಚಾರ ಆರೋಪದ ಬಗ್ಗೆ ಮಾತನಾಡಿದ ಭೂ ಮಾಲೀಕರ ಹೋರಾಟ ಸಮಿತಿಯ ಮುಖಂಡ ಬ್ರಿಜೇಶ್ ಶೆಟ್ಟಿ ಮಿಜಾರು, "ಪ್ರಭಾವಿಗಳ, ಭೂಮಾಫಿಯಾಗಳ ಒತ್ತಡಕ್ಕೆ ಮಣಿದು ಅವರ ಅನುಕೂಲಕ್ಕೆ ಅನುಗುಣವಾಗಿ ಅಲೈನ್ಮೆಂಟ್ಗಳಲ್ಲಿ ಆಗಾಗ ಬದಲಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ನಮ್ಮಲ್ಲಿ ಎನ್ಎಚ್ ಅಧಿಕಾರಿ ಮಾತನಾಡಿರುವ ವಾಯ್ಸ್ ರೆಕಾರ್ಡ್ ದಾಖಲೆಯೂ ಇದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂ ಮಾಲೀಕರಿಗೆ ಮಾಡುತ್ತಿರುವ ಅನ್ಯಾಯ, ವಂಚನೆ ಹಾಗೂ ಹಗರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು" ಎಂದು ಒತ್ತಾಯಿಸಿದರು.
ಆರಂಭದಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಮೂರು ಗ್ರಾಮಗಳ ಅವಾರ್ಡ್ ಮಾರ್ಗಸೂಚಿಯಂತೆ ತಯಾರಿ ಮಾಡಿ ಹೆದ್ದಾರಿ ಇಲಾಖೆಯ ಪ್ರಾದೇಶಿಕ ಕಚೇರಿಗೆ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಅಲ್ಲಿಯ ಅಧಿಕಾರಿಗಳು ಒಪ್ಪಿಗೆ ನೀಡದ ಭೂ ಮಾಲೀಕರಿಗೆ ವಂಚನೆ ಮಾಡಲು ಅವಾರ್ಡ್ ಹಿಂದೆ ಕಳುಹಿಸಿ ಮಾರ್ಗಸೂಚಿಗಳನ್ನು ತಿರುಚಿದ್ದರು. ಪರಿಣಾಮ ನಮ್ಮ ಕೃಷಿ ಭೂಮಿಗೆ ಮಾರುಕಟ್ಟೆ ದರಕ್ಕಿಂತ 8 -10 ಪಟ್ಟು ಕಡಿಮೆ ಬೆಲೆ ನೀಡಲಾಯಿತು. ಈ ಬಗ್ಗೆ ಡಿಸಿ ಗಮನಕ್ಕೂ ತಂದಿದ್ದು, ಸರಿಯಾದ ಬೆಲೆ ನಿಗದಿ ಮಾಡಿ ಭೂ ಮಾಲೀಕರಿಗೆ ಪರಿಹಾರ ಕೊಡಬೇಕು ಎಂಬ ಶಿಫಾರಸಿಗೆ ಬೆಲೆ ಕೊಡದೇ ನಮ್ಮ ಮನವಿಯನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
"ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನಾವು ಸಂಪರ್ಕಿಸಿದ್ದೇವೆ. ಆದರೆ, ಯಾವುದೇ ಪರಿಹಾರ ದೊರಕಿಲ್ಲ. ಈ ಭಾಗದ ಸುಮಾರು 250 ಮಂದಿ ಭೂ ಮಾಲೀಕರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದೆವು. ಇಲ್ಲಿಯವರೆಗೆ ಅವಾರ್ಡ್ ಆಗಿರುವ ಶೇ 90ರಷ್ಟು ಕೃಷಿ ಭೂಮಿಗೆ ತಡೆಯಾಜ್ಞೆ ಪಡೆಯಲಾಗಿದೆ. ಆದರೆ, ಈವರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಳೆದ ಒಂದು ವರ್ಷದಿಂದ ತಡೆಯಾಜ್ಞೆಗೆ ಪ್ರತಿಕ್ರಿಯೆ ದೊರಕಿಲ್ಲ. ಅಲ್ಲದೆ ಮಂಗಳೂರಿಗೆ ಆಗಮಿಸಿದ್ದ ಕೇಂದ್ರ ಭೂಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದ್ದೆವು ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ" ಎಂದು ದೂರಿದರು.
ಮಂಗಳೂರು- ಕಾರ್ಕಳ ಚತುಷ್ಪಥ ಹೆದ್ದಾರಿ 169 ರಲ್ಲಿ ಭಾರಿ ಹಗರಣ ನಡೆದಿದ್ದು, ಭೂಸ್ವಾಧೀನ ಹೆಸರಲ್ಲಿ ಭೂ ಮಾಲೀಕರನ್ನೇ ವಂಚಿಸಿದ್ದಾರೆ. ಭೂ ಮಾಲೀಕರಿಗೆ ಸೂಕ್ತ ಪರಿಹಾರ ನೀಡದೆ ಅಧಿಕಾರಿಗಳಿಂದ ವಂಚನೆ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಭೂಮಿ ಕೊಟ್ಟ ಭೂ ಮಾಲೀಕರು ಕಂಗಾಲಾಗಿದ್ದಾರೆ.
ಮಾರುಕಟ್ಟೆ ದರಕ್ಕಿಂತ ಹತ್ತುಪಟ್ಟು ಕಡಿಮೆ ದರವನ್ನು ಅಧಿಕಾರಿಗಳು ಭೂಮಿಗೆ ನೀಡಿದ್ದಾರೆ. ಅದರಲ್ಲೂ ಹೆದ್ದಾರಿ ಅಭಿವೃದ್ಧಿಗೆ ಕೊಡುವ ಭೂಮಿಗೆ ಜಿಎಸ್‌ಟಿ ಹಾಕಿ ವಂಚನೆ ಮಾಡಿದ್ದಾರೆ. ಶೇ 12 ರಿಂದ 13ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿ ಭೂ ಮಾಲೀಕರಿಗೆ ವಂಚಸಿದ್ದಾರೆ ಎಂದು ಜನರು ಆರೋಪಿಸಿದರು.












Click it and Unblock the Notifications