ಯಡಿಯೂರಪ್ಪ ಮತ್ತು ಬಿಜೆಪಿಗೆ ಪೂಜಾರಿ ಪ್ರಶ್ನೆಗಳು?

ಮಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಜನಾರ್ದನ ಪೂಜಾರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಬಿಜೆಪಿಗೆ ಸೇರುವುದಾಗಿ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಬಿಎಸ್‌ವೈ ಇಲ್ಲದೆ ಬಿಜೆಪಿ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು. [ಬಿಜೆಪಿಗೆ ಯಡಿಯೂರಪ್ಪ ವಾಪಸಾತಿ ಯಾವಾಗ?]
ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ನಾಯಕರು ಯಡಿಯೂರಪ್ಪ ಅವರನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಆಗ ಯಡಿಯೂರಪ್ಪ ಭ್ರಷ್ಟರು ಎಂದು ಈ ನಾಯಕರು ಆರೋಪಿಸಿದ್ದರು. ಸದ್ಯ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವ ನಾಯಕರಿಗೆ ನೈತಿಕತೆ ಇದೆಯೇ ಎಂದು ಪೂಜಾರಿ ಪ್ರಶ್ನಿಸಿದರು.
ಯಡಿಯೂರಪ್ಪ ಅವರು ಸಹ ಬಿಜೆಪಿ ತೊರೆದು ಕೆಜೆಪಿ ಕಟ್ಟುವಾಗ, ಕೊನೆ ಉಸಿರಿರುವವರೆಗೂ ಬಿಜೆಪಿಗೆ ಪಕ್ಷಕ್ಕೆ ಮರಳುವುದಿಲ್ಲ ಎಂದು ಹೇಳಿದ್ದರು. ಸದ್ಯ ಅವರು ತಮ್ಮ ಮಾತನ್ನೇ ಮರೆತರಾ? ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಲೇವಡಿ ಮಾಡಿದ್ದಾರೆ. ಬಿಜೆಪಿ ನಾಯಕರು ಮತ್ತು ಯಡಿಯೂರಪ್ಪ ಜನರಿಗೆ ಎಂತಹ ಸಂದೇಶ ತಲುಪಿಸುತ್ತಿದ್ದಾರೆ ಎಂದರು.
ಬಿಜೆಪಿ ತೊರೆಯುವಾಗ ನನ್ನ ಪಕ್ಷದವರೇ ಮೋಸ ಮಾಡಿದರು, ಬೆನ್ನಿಗೆ ಚೂರಿ ಇರಿದರು, ಬಿಜೆಪಿಯೇ ಮೋಸ, ರಾಜ್ಯ ನಾಯಕರು ಹೊಸದಿಲ್ಲಿ ನಾಯಕರ ಕಿವಿ ಊದಿದರು ಎಂದೆಲ್ಲಾ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದರು. ಈಗ ಅವರಿಗೆ ಎಲ್ಲವೂ ಮರೆತು ಹೋಯಿತೇ? ಅವರ ಉಸಿರು ನಿಂತು ಹೋಯಿತೇ? ಈ ಬಗ್ಗೆ ಜನತೆಗೆ ಏನು ಉತ್ತರ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಚಾರದ ಬಗ್ಗೆ ಮಾತನಾಡುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಲವು ಆರೋಪಗಳನ್ನು ಎದುರಿಸುತ್ತಿರುವ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಏಕೆ ಒಪ್ಪಿಗೆ ನೀಡಿದರು?, ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಯಡಿಯೂರಪ್ಪ ಅವರ ವಾಪಸಾತಿಗೆ ಹೇಗೆ ಒಪ್ಪಿಗೆ ನೀಡಿದರು ಎಂದು ಪೂಜಾರಿ ಪ್ರಶ್ನಿಸಿದರು. ಯಡಿಯೂರಪ್ಪ ಬಿಜೆಪಿಗೆ ಸೇರಿದರೆ ಬಿಜೆಪಿ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು ಎಂದು ಪೂಜಾರಿ ಒತ್ತಾಯಿಸಿದರು.












Click it and Unblock the Notifications