ಭಾರೀ ಮಳೆಗೆ ತುಂಬಿದ ನೇತ್ರಾವತಿ, ದಕ ಜಿಲ್ಲೆಯಲ್ಲಿ ಪ್ರವಾಹ ಭೀತಿ
ಮಂಗಳೂರು, ಜುಲೈ, 20 : ನಗರದಲ್ಲಿ ಕಳೆದ 5 ದಿನಗಳಿಂದ ಮಳೆ ಆರ್ಭಟಿಸುತ್ತಿದ್ದು, ಗಾಳಿಗೆ ಮರಗಳು ಉರುಳಿ ಸಂಚಾರ ಸ್ಥಗಿತಗೊಂಡಿದೆ. ಸಾರಿಗೆ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ತನ್ನ ಅಪಾಯಮಟ್ಟ ಮೀರಿ ಹರಿಯುತ್ತಿದೆ.
ಶನಿವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 6.2 ಮೀ.ನಿಂದ 7.4 ಮೀ.ಗೆ ಏರಿದೆ. ಶಂಭೂರು ವೆಂಟೆಡ್ ಡ್ಯಾಂ ಒಳ ಹರಿವು ಹೆಚ್ಚಾಗಿದೆ. ಭಾನುವಾರ ಸಂಜೆ ಸುರಿದ ಮಳೆಗೆ ತಗ್ಗು ಪ್ರದೇಶಗಳು, ಜಮೀನುಗಳಿಗೆ ನೀರು ನುಗ್ಗಿದೆ.[ಜೋಗ ಮೈದುಂಬಿದೆ, ಹೋಗೋಣ ಬರ್ತೀರಾ ಆಕಡೆಗೆ]

ಶಂಭೂರು ಡ್ಯಾಂ ವ್ಯಾಪ್ತಿಯನ್ನು ಪ್ರವೇಶಿಸದಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮುಳುಗುವ ಭೀತಿಯಲ್ಲಿರುವ ರಸ್ತೆಗಳಿಗೆ ನಾಕಾಬಂದಿ ಹಾಕಲಾಗಿದೆ. ನೆರೆ ಹಾವಳಿ ಎದುರಿಸುತ್ತಿರುವ ಮನೆಗಳನ್ನು ಸ್ಥಳಾಂತರಿಸಲಾಗಿದ್ದು, ಗಂಜಿ ಕೇಂದ್ರದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದಲ್ಲೇ ಇರಲು ಸೂಚನೆ: ಕಳೆದ 2 ದಿನಗಳಿಂದ ಮಳೆ, ಗಾಳಿ ವಿಪರೀತವಾಗಿದ್ದು, ಗ್ರಾಪಂ,ಕಂದಾಯ ಅಧಿಕಾರಿಗಳು ತಮಗೆ ಸೂಚಿಸಲಾದ ಗ್ರಾಮದಲ್ಲೇ ಮೊಕ್ಕಾಂ ಇರುವಂತೆ ತಾಲೂಕು ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲದೇ ನಿರಂತರ ಸಂಪರ್ಕದಲ್ಲಿರುವ ಕಂಟ್ರೋಲ್ ರೂಂ ಸಿಬ್ಬಂದಿ ಮಾರ್ಗದರ್ಶನ ನೀಡಲಾಗಿದೆ. ಮಾಹಿತಿಗಾಗಿ ಸಂಚಾರ ದಳ ಆಧರಿಸಲು ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
2ನೇ ಬಾರಿ ಮುಳುಗಿದ ಕುಮಾರಧಾರ ಸೇತುವೆ: ಸುಬ್ರಹ್ಮಣ್ಯದಲ್ಲಿಯೂ ಭಾನುವಾರ ಧಾರಾಕಾರ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ವಿಶ್ರಾಂತಿ ಪಡೆದಿದ್ದ ಮಳೆ ಪುನಃ ಆರ್ಭಟಿಸಿದ್ದು ಕುಮಾರಧಾರ ಸೇತುವೆ ಮತ್ತು ಕೆಳಗಿನ ಸ್ನಾನಘಟ್ಟ ಮುಳುಗಿದೆ. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕ್ಷೇತ್ರದಲ್ಲಿ ಭಾರಿ ಭಕ್ತರು ಸೇರಿದ್ದು ಜನಸಂದಣಿ ಅಧಿಕವಾಗಿತ್ತು. ಸೇತುವೆ ಮುಳುಗಡೆಗೊಂಡ ಕಾರಣ ದಡದ ಎರಡೂ ಬದಿ ಜನರು ತಾಸುಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣಗೊಂಡಿತ್ತು.












Click it and Unblock the Notifications