ಎತ್ತಿನಹೊಳೆ ಯೋಜನೆಗೆ ತಾತ್ಕಾಲಿಕ ತಡೆಯಾಜ್ಞೆ
ಮಂಗಳೂರು, ಸೆ. 18 : ದಕ್ಷಿಣ ಕನ್ನಡ ಭಾಗದ ಜನರ ತೀವ್ರ ವಿರೋಧಕ್ಕೆ ಕಾರಣವಾಗಿರುವ ಎತ್ತಿನಹೊಳೆ ಯೋಜನೆಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಚಿಕ್ಕಬಳ್ಳಾಪುರ, ಕೋಲಾರ ಮುಂತಾದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಚೆನ್ನೈಯ ಹಸಿರು ನ್ಯಾಯಮಂಡಳಿ ಬುಧವಾರ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದ್ದು, ಸೆಪ್ಟಂಬರ್ 28ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯ ತನಕ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ. [ಚಿತ್ರಗಳು : ಎತ್ತಿನಹೊಳೆ ವಿರೋಧಿಸಿ ಹೆದ್ದಾರಿ ಬಂದ್]

ಎತ್ತಿನ ಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟದ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಲಿದೆ. ಆದ್ದರಿಂದ, ಯೋಜನೆ ರದ್ದುಪಡಿಸುವಂತೆ ಕೋರಿ 'ಜನ ಸಂಗ್ರಾಮ ಪರಿಷತ್ ರಾಜ್ಯ ಸಂಘಟನೆ'ಯ ಕಾರ್ಯದರ್ಶಿ ಸೋಮಶೇಖರ್ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ['ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿ ಬರಿದಾಗುತ್ತೆ']
ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ಪೀಠ ತಡೆಯಾಜ್ಞೆ ನೀಡಿದೆ. ಸೆ. 28ರ ಸೋಮವಾರದ ವರೆಗೆ ಅರಣ್ಯ ಪ್ರದೇಶದ ಒಳಗೆ ಅಥವಾ ಹೊರಗೆ ಈ ಯೋಜನೆಗೆ ಸಂಬಂಧಿಸಿದ ಯಾವುದೇ ಕಾಮಗಾರಿ ನಡೆಸಬಾರದು ಎಂದು ಹೇಳಿದೆ. ಸೆ. 28ರಂದು ಅರ್ಜಿ ಕುರಿತು ಅಂತಿಮ ವಾದ ಆಲಿಸಿ ತೀರ್ಪು ನೀಡುವುದಾಗಿ ನ್ಯಾ.ಜ್ಯೋತಿಮಣಿ ಮತ್ತು ನ್ಯಾ.ನಾಗೇಂದ್ರನ್ ಅವರ ಪೀಠ ಆದೇಶ ನೀಡಿದೆ. [ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗಾಗಿ ಮಾತ್ರ]
ಶಂಕುಸ್ಥಾಪನೆಯಾಗಿದೆ : ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ 24 ಟಿಎಂಸಿ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. 2014ರ ಮಾರ್ಚ್ 3ರಂದು ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ.
ನೇತ್ರಾವತಿ ನದಿಯ ಉಪ ನದಿಯಾದ ಎತ್ತಿನಹೊಳೆಯ ನೀರನ್ನು ಈ ಯೋಜನೆ ಮೂಲಕ ಬರ ಪೀಡಿತ ಜಿಲ್ಲೆಗಳಲ್ಲಿ ಒದಗಿಸಲಾಗುತ್ತದೆ. ಆದರೆ, ಈ ಯೋಜನೆ ಜಾರಿಯಾದರೆ ನೇತ್ರಾವತಿ ಬತ್ತಿಹೋಗುತ್ತದೆ. ಆದ್ದರಿಂದ ಯೋಜನೆ ಕೈಬಿಡಬೇಕು ಎಂದು ದಕ್ಷಿಣ ಕನ್ನಡದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ.
ಎತ್ತಿನಹೊಳೆ ಯೋಜನೆಯ ಸಾಧಕ ಬಾಧಕಗಳ ಕುರಿತು ಕರಾವಳಿಯ ಜಿಲ್ಲೆಯ ಜನರೊಂದಿಗೆ ಮಾತುಕತೆ ಮಾಡಿದ ಬಳಿಕವೇ ಯೋಜನೆ ಅನುಷ್ಠಾನಗೊಳಿಸುವುದಾಗಿ ಸರ್ಕಾರ ಹೇಳಿತ್ತಾದರೂ ಅಂಥ ಯಾವುದೇ ಸಭೆ ಮಾಡದೇ ಶಾಸಕರು ಮತ್ತು ಮಂತ್ರಿಗಳು ಬೆಂಗಳೂರಲ್ಲಿ ಸಭೆ ನಡೆಸಿ ಮಂಜೂರಾತಿಗೆ ಸಮ್ಮತಿಸಿದ್ದಾರೆ ಎನ್ನುವ ಆರೋಪಗಳಿವೆ.












Click it and Unblock the Notifications