Mangalure Bank Robbery: ಬೀದರ್ ರೀತಿಯಲ್ಲೇ ಉಳ್ಳಾಲದಲ್ಲೂ ಬ್ಯಾಂಕ್ ದರೋಡೆ
Mangalure Bank Robbery: ಬೀದರ್‌ನಲ್ಲಿ ನಿನ್ನೆಯಷ್ಟೇ ಕಿಡಿಗೇಡಿಗಳು ಎಸ್‌ಬಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ಸಿಬ್ಬಂದಿ ಮೇಲೆ ಸಿನಿಮೀಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿದ್ದರು. ಅಲ್ಲದೆ, ಈ ವೇಳೆ 93,00,000 ರೂಪಾಯಿ ಹಣ ದೋಚಿಕೊಂಡು ಪರಾರೊಯಾಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಇಂದು (ಜನವರಿ 17) ಇಂತಹದ್ದೇ ಘಟನೆಯೊಂದು ಮಂಗಳೂರಿನಲ್ಲೂ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕೋಟೆಕಾರು ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿದೆ. ಹಾಡಹಗಲೇ 5 ಮಂದಿ ಬ್ಯಾಂಕ್‌ಗೆ ನುಗ್ಗಿದ್ದು, ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ಚಿನ್ನ ಒಡವೆ, ನಗದುಗಳೆಲ್ಲವನ್ನ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ 5 ಮಂದಿ ದರೋಡೆಕೋರರು ಫಿಯೇಟ್ ಕಾರಿನಲ್ಲಿ ಬಂದಿದ್ದು, ಅಲ್ಲಿನ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ದರೋಡೆ ನಡೆಸಿದ್ದಾರೆ. ಬಳಿಕ ಈ ತಂಡ ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ ಪರಿಶೀಲನೆ ನಡೆಸಿದ್ದು, ಇದೀಗ ದರೋಡೆಕೋರರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಬೀದರ್‌ನಲ್ಲಿ ಗುರುವಾರ (ಜನವರಿ 16) ಬೆಳಗ್ಗೆ ಎಟಿಎಂಗೆ ಹಣ ತುಂಬಿಸುವ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಗಳು ಹೈದರಾಬಾದ್ನಲ್ಲಿ ಪತ್ತೆಯಾಗಿದ್ದಾರೆ. ಮೂವರು ದರೋಡೆಕೋರರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ತಪ್ಪಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೀದರ್‌ನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಎಟಿಎಂಗೆ ಹಣ ತುಂಬಿಸಲು ಬ್ಯಾಂಕ್ ಸಿಬ್ಬಂದಿ ತೆರಳಿದಾಗ ದರೋಡೆಕೋರರು ಗುಂಡು ಹಾರಿಸಿ ಓರ್ವನನ್ನು ಕೊಂದು ಹಣದ ಸಮೇತ ಪರಾರಿ ಆಗಿದ್ದರು. ಕೇಸ್ ದಾಖಲಿಸಿಕೊಂಡು ದರೋಡೆಕೋರರ ಬೆನ್ನತ್ತಿದ್ದ ಪೊಲೀಸರು, ಸುಳಿವು ಆಧರಿಸಿ ಹೈದರಾಬಾದ್ನಲ್ಲಿ ಶೋಧ ನಡೆಸುತ್ತಿರುವ ವೇಳೆ ತಗ್ಲಾಕೊಂಡಿದ್ದಾರೆ. ಈ ವೇಳೆ ಅಲ್ಲಿಯೂ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದು, ಇದರಿಂದ ಬಸ್ ಟ್ರಾವೆಲ್ ಮ್ಯಾನೇಜರ್ ಗಾಯಗೊಂಡಿದ್ದಾರೆ.
ಬೀದರ್‌ನಲ್ಲಿ ಹಣ ದೋಚಿಕೊಡು ಬಂದಿದ್ದ ಆರೋಪಿಗಳು ಹೈದರಾಬಾದ್ ಮೂಲಕ ಛತ್ತೀಸ್‌ಗಢದ ರಾಯಪುರಕ್ಕೆ ಪರಾರಿ ಆಗಲು ಪ್ಲಾನ್ ರೂಪಿಸಿದ್ದರು. ಮೂವರು ದುಷ್ಕರ್ಮಿಗಳು ಖಾಸಗಿ ಬಸ್ ಟ್ರಾವೆಲ್ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಸಂಜೆ 7:30ಕ್ಕೆ ಬಸ್ ಹೊರಡಬೇಕಿತ್ತು. ಅದಕ್ಕೂ ಮುಂಚೆ ಆರೋಪಿಗಳನ್ನ ಟ್ರಾವೆಲ್ ಏಜೆನ್ಸಿ ಅವರನ್ನು ಪಿಕಪ್ ಮಾಡಿದ್ದಾರೆ.
ಈ ವೇಳೆ ಆರೋಪಿಗಳ ಲಗೇಜ್ ಅನ್ನು ಬಸ್ ಸಿಬ್ಬಂದಿ ಪರಿಶೀಲಿಸಿದ್ದಾರೆ. ಬ್ಯಾಗ್ಗಳಲ್ಲಿ ಭಾರೀ ಪ್ರಮಾಣದಲ್ಲಿ ಹಣ ಕಂಡು ಬಂದಿದೆ. ಇದನ್ನು ಸಿಬ್ಬಂದಿ ಪ್ರಶ್ನೆ ಮಾಡಿದಾಗ ಅವರಿಗೇ ಸ್ವಲ್ಪ ಹಣ ಕೊಡಲು ಮುಂದಾಗಿದ್ದಾರೆ. ಈ ವೇಳೆ ಅದೇ ಪಿಕಪ್ ವ್ಯಾನ್ನಲ್ಲಿದ್ದ ಕರ್ನಾಟಕ ಪೊಲೀಸರು ಇದನ್ನ ಗಮನಿಸಿದ್ದಾರೆ.
ಪೊಲೀಸರು ಎಂದು ತಿಳಿದ ತಕ್ಷಣ ಆರೋಪಿಗಳು ತಮ್ಮ ಬ್ಯಾಗ್‌ನಲ್ಲಿದ್ದ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ. ಇದರಿಂದ ಟ್ರಾವೆಲ್ ಏಜೆನ್ಸಿ ಮ್ಯಾನೇಜರ್ ಹೊಟ್ಟೆಗೆ ಬುಲೆಟ್ ಹೊಕ್ಕಿದೆ. ಸ್ಥಳದಲ್ಲಿದ್ದ ಮತ್ತೊಬ್ಬರಿಗೂ ಗಾಯವಾಗಿದೆ. ಪೊಲೀಸರು ಹರಸಾಹಪಟ್ಟು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇನ್ನುಳಿದ ಇಬ್ಬರು ಪರಾರಿ ಆಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಅಹಮ್ಮದ್ ಘಟನೆಯ ಬಗ್ಗೆ ವಿವರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications