ಮಂಗಳೂರು: ಮುಸ್ಲಿಂ ಯುವತಿಯನ್ನು ಮದುವೆಯಾದ ಭಜರಂಗದಳ ಕಾರ್ಯಕರ್ತ
ಮಂಗಳೂರು, ಡಿಸೆಂಬರ್ 08: ದಕ್ಷಿಣ ಕನ್ನಡ, ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ. ಹಿಂದೂ-ಮುಸ್ಲಿಂ ಜಗಳ ಇಲ್ಲಿ ಸಾಮಾನ್ಯವಾಗಿದ್ದು, ಲವ್ ಜಿಹಾದ್ ಪ್ರಕರಣಗಳು, ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ಇಲ್ಲಿ ಆಗಾಗ ಸುದ್ದಿಯಲ್ಲಿರುತ್ತದೆ. ಆದರೆ ಇದೀಗ ಲವ್ ಜಿಹಾದ್ ವಿರುದ್ದ ಧ್ವನಿಯೆತ್ತಿದ್ದ ಭಜರಂಗದಳದ ಕಾರ್ಯಕರ್ತನೇ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದಾನೆ.
ಮಂಗಳೂರಿನ ಸುರತ್ಕಲ್‌ನಲ್ಲೊಂದು ಹಿಂದೂ-ಮುಸ್ಲಿಂ ಜೋಡಿಯ ಲವ್ ಸ್ಟೋರಿ ಕೊನೆಗೆ ಮದುವೆಯಲ್ಲಿ ಒಂದಾಗಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ಭಂಡಾರಿ, ಮುಸ್ಲಿಂ ಯುವತಿ ಆಯೇಷಾ ಜೊತೆ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 30ರಂದೇ ಸುರತ್ಕಲ್ ಪ್ರಶಾಂತ್ ಬಂಡಾರಿ ಜೊತೆ ಆಯೇಷಾ ಎಂಬ ಯುವತಿ ತೆರಳಿದ್ದು, ಸದ್ಯ ಇಬ್ಬರು ವಿವಾಹವಾಗಿರುವ ಫೋಟೋ ವೈರಲ್ ಆಗಿದೆ.

ಪ್ರಶಾಂತ್ ಬಂಡಾರಿ ಸುರತ್ಕಲ್ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಯತ್ನಿಸಿದ್ದ ಎನ್ನಲಾಗಿದೆ. ಇದೀಗ ತಾನು ಮುಸ್ಲಿಂ ಯುವತಿಯನ್ನು ಪ್ರೀತಿಸಿ ವರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಆಯೇಷಾ ಪೋಷಕರು ದೂರು ದಾಖಲಿಸಿದ್ದಾರೆ.
ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರಾಕರಣೆ
ಮಂಗಳೂರಿನಲ್ಲಿ ಧರ್ಮ ದಂಗಲ್ ನಿಲ್ಲದ ವಿಚಾರವಾಗಿದೆ. ಮಂಗಳೂರಿನ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದ ಷಷ್ಠಿ ಮಹೋತ್ಸವ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರಾಕರಣೆ ಮಾಡಲಾಗಿದೆ. ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿಸೆಂಬರ್ 14 ರಿಂದ 19 ರವರೆಗೆ ಷಷ್ಟಿ ಮಹೋತ್ಸವ ಜಾತ್ರೆ ಅದ್ಧೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿ ಇತ್ತೀಚಿಗೆ ಷಷ್ಠಿ ಹಿನ್ನೆಲೆಯಲ್ಲಿ ಸಂತೆ ವ್ಯಾಪಾರದ ಹಂಚಿಕೆ ನಡೆಸಿದೆ. ಈ ವೇಳೆ ಜಾಗ ಕೇಳಲು ಹೋಗಿದ್ದ ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಹಂಚಿಕೆಗೆ ನಿರಾಕರಣೆ ಮಾಡಲಾಗಿದೆ. ಅಲ್ಲದೇ ಹಿಂದೂಗಳ ಹೆಸರಿನಲ್ಲಿ ಅಂಗಡಿ ಪಡೆಯುವಂತೆ ಸೂಚಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನದ ಪ್ರಾಂಗಣದ ಹೊರಗಡೆ ವ್ಯಾಪಾರ ನಡೆಯುತ್ತದೆ. ಆದರೆ ಇಲ್ಲಿ ಧಾರ್ಮಿಕ ತಾರತಮ್ಯ ನಡೆದಿದೆ. ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶ ಕೊಡುತ್ತಿಲ್ಲ ಎಂದು ಬೀದಿ ಬದಿ ವ್ಯಾಪಾರಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಕ್ರಮ ವಹಿಸದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications