ಸೌಜನ್ಯ ಪ್ರಕರಣ ಮರುತನಿಖೆ, ಸಿಬಿಐ ಕೋರ್ಟ್ ತೀರ್ಪು ಓದಿ ನಿರ್ಧಾರ-ಸಿಎಂ ಸಿದ್ದರಾಮಯ್ಯ
ಮಂಗಳೂರು, ಆಗಸ್ಟ್ 01: ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಠಿಸಿರುವ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರುತನಿಖೆ ಆಗಬೇಕೆಂಬ ಕೂಗು ಹೆಚ್ಚಾಗಿದೆ. ಈ ಬಗ್ಗೆ ಮಂಗಳೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸೌಜನ್ಯ ಕೇಸ್ ಸಿಬಿಐಗೆ ಕೊಟ್ಟಿತ್ತು, ಕೋರ್ಟ್ನಲ್ಲಿ ಇತ್ತು. ಅವರ ಪೋಷಕರು ಮರು ತನಿಖೆಗೆ ಮನವಿ ಮಾಡಿದ್ದಾರೆ. ಕಾನೂನು ಪ್ರಕಾರ ಏನಾಗಬೇಕು ಅಂತ ನೋಡಿ ಮುಂದಿನ ನಿರ್ಧಾರ ಮಾಡಲಾಗುತ್ತದೆ ಎಂದರು.

ನಾನು ಲಾಯರ್ ಆಗಿ ಹೇಳುವುದಾದರೆ ಇದರ ಬಗ್ಗೆ ಹೈಕೋರ್ಟ್‌ಗೆ ಅಪೀಲ್ ಹೋಗಬೇಕು. ನಾನು ಸಿಬಿಐ ಕೋರ್ಟ್ ಜಡ್ಜ್‌ಮೆಂಟ್ ನೋಡಿಲ್ಲ. ಅದರ ಜಡ್ಜ್‌ಮೆಂಟ್ ಓದಿ ನೋಡುತ್ತೇನೆ. ಅಪೀಲ್‌ಗೆ ಅವಕಾಶ ಇದೆಯಾ ನೋಡುತ್ತೇನೆ. ಅವರ ಪೋಷಕರು ಜಡ್ಜ್ ಮೆಂಟ್ ಕಾಪಿ ತಂದು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಉಡುಪಿ ಮೊಬೈಲ್ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಕೇಸ್‌ನಲ್ಲಿ ಪೊಲೀಸರು ಸುಮೋಟೋ ಎಫ್‌ಐಆರ್ ಮಾಡಿದ್ದಾರೆ. ಡಿವೈಎಸ್‌ಪಿ ತನಿಖೆ ಆಗುತ್ತಿದೆ. ಡಿವೈಎಸ್‌ಪಿ ತನಿಖೆ ನಡೀತಾ ಇದೆ. ಅದು ಮೊದಲು ನಡೆಯಲಿ. ರಾಷ್ಟ್ರೀಯ ಮಹಿಳಾ ಆಯೋಗವೇ ಅಲ್ಲಿ ಕ್ಯಾಮರಾ ಇಟ್ಟಿರಲಿಲ್ಲ ಎಂದಿದ್ದಾರೆ. ತನಿಖಾ ವರದಿ ಬರಲಿ, ಆಮೇಲೆ ಈ ಬಗ್ಗೆ ಮಾತನಾಡುವ.

ಕಾಲೇಜಿನಲ್ಲಿರುವ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು ಎಂದು ಹೋಂ ಮಿನಿಸ್ಟರ್ ಹೇಳಿರಬಹುದು. ಎಫ್ಐಆರ್ ಆಗಿ ತನಿಖೆ ಆಗ್ತಿದೆ, ಡಿವೈಎಸ್ಪಿ ತನಿಖೆ ಮಾಡುತ್ತಿದ್ದಾರೆ. ಡಿವೈಎಸ್ಪಿ ಲೆವೆಲ್ ತನಿಖೆ ಆಗುತ್ತಿರುವಾಗ ಎಸ್‌ಐಟಿ ಪ್ರಶ್ನೆ ಉದ್ಭವಿಸಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.
ಇನ್ನು ನೈತಿಕ ಪೊಲೀಸ್ ಗಿರಿ ಪ್ರಕರಣದ ಕುರಿತು ಮಾತನಾಡಿದ ಸಿಎಂ, ಯಾರೇ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ಕೈಗೆತ್ತಿಕೊಳ್ಳಲು ಇಲ್ಲಿ ಯಾರಿಗೂ ಅವಕಾಶ ಇಲ್ಲ. ಪೊಲೀಸರಿಗೆ ಇದಕ್ಕೆ ಅವಕಾಶ ಕೊಡಬೇಡಿ ಅಂದಿದ್ದೇನೆ. ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ಮಾಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಟೀಕೆ ಮಾಡಿದರೆ ಕ್ರಮ ತೆಗೆದುಕೊಳ್ಳಲ್ಲ. ಸುಳ್ಳು ಸುದ್ದಿಗೆ ಕ್ರಮ ತೆಗೆದುಕೊಳ್ಳುತ್ತೇವೆ. ಫ್ಯಾಮಿಲಿ ಬಗ್ಗೆ ಹೇಳೋದು ಟೀಕೇನಾ? ಏನು ಬೇಕಾದರೂ ಹೇಳಬಹುದಾ? ಟೀಕೆ ಬೇರೆ, ಸುಳ್ಳು ಸುದ್ದಿ ಹಬ್ಬಿಸೋದು ಬೇರೆ. ವೈಯಕ್ತಿಕವಾಗಿ ತೇಜೋವಧೆ ಮಾಡೋದು ಕೂಡ ಬೇರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications