ಪ್ರವೀಣ್ ನೆಟ್ಟಾರ್ ಹತ್ಯೆ; ಮಂಗಳೂರಿನಲ್ಲಿ ಎನ್‌ಐಎ ದಾಳಿ ವೇಳೆ ಆತಂಕಕಾರಿ ಅಂಶ ಬಯಲು
ಮಂಗಳೂರು, ಸೆಪ್ಟೆಂಬರ್, 08: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಆತಂಕಕಾರಿ ಅಂಶ ಬಯಲಾಗಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ 33 ಕಡೆಗಳಲ್ಲಿ ಎನ್‌ಐಎ ದಾಳಿ ನಡೆಸಿದೆ.
ಎನ್‌ಐಎ ದಾಳಿ ಸಮಯದಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗಳೆಲ್ಲರು ಪಿಎಫ್ಐ ಸಕ್ರಿಯ ಕಾರ್ಯಕರ್ತರು ಎನ್ನುವುದು ಪತ್ತೆ ಆಗಿದೆ. ಒಂದು ಸಮುದಾಯದಲ್ಲಿ ಭೀತಿ ಮೂಡಿಸುವ ಉದ್ದೇಶದಿಂದ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಸಮಾಜದಲ್ಲಿ ಭಯ ಸೃಷ್ಟಿಸುವ ಉದ್ದೇಶದಿಂದ ಕೊಲೆಗೆ ಷಡ್ಯಂತ್ರ ನಡೆಸಿದ್ದರು ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳಿಗೆ ಸಂಬಂಧಪಟ್ಟ ಮನೆಗಳು, ಆರೋಪಿಗಳಿಗೆ ನೆರವು ನೀಡಿದವರ ಮನೆ, ಕಚೇರಿಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು. ದಾಳಿ ವೇಳೆ ನಗದು, ದಾಖಲೆ ಪತ್ರಗಳು, ಡಿಜಿಟಲ್ ಸಾಕ್ಷ್ಯಗಳು, ಸುಧಾರಿತ ಶಸ್ತ್ರಗಳು ಮತ್ತು ಮದ್ದುಗುಂಡು ಪತ್ತೆ ಆಗಿವೆ.
32 ಕಡೆಗಳಲ್ಲಿ ದಾಳಿ ಮಾಡಿದ್ದ ಎನ್‌ಐಎ
ಪುತ್ತೂರು ಮತ್ತು ಸುಳ್ಯ ತಾಲೂಕಿನ ಸುಮಾರು 32 ಕಡೆಗಳಲ್ಲಿ ಎನ್‌ಐಎ ದಾಳಿ ಮಾಡಿತ್ತು. ಜೊತಗೆ ಕೆಲವು ಮನೆ ಮತ್ತು ಖಾಸಗಿ ಕಟ್ಟಡಗಳ ಮೇಲೆ ದಾಳಿ ನಡೆಸಿತ್ತು. ಆರೋಪಿಗಳಿಗೆ ಸಹಕರಿಸಿದವರ ಮನೆ ಮೇಲೂ ಎನ್‌ಐಎ ಅಧಿಕಾರಿಗಳ ತಂಡ ದಾಳಿ ಮಾಡಿತ್ತು.

ಎನ್‌ಐಎ ಅಧಿಕಾರಿಗಳಿಗೆ ರಾಜ್ಯ ಪೊಲೀಸರು ಸಾಥ್ ನೀಡಿದ್ದು, ಪ್ರಕರಣ ಮತ್ತಷ್ಟು ಆಯಾಮಗಳ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಅಲ್ಲದೇ ಪಿಎಫ್ಐ ಮತ್ತು ಎಸ್‌ಡಿಪಿಐ ಮುಖಂಡರ ಮನೆ ಮೇಲೂ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಮುಖಂಡರ ವಿಚಾರಣೆಯನ್ನು ಮಾಡಿದ್ದಾರೆ.
ಜುಲೈ 26ರಂದು ಪ್ರವೀಣ್ ನೆಟ್ಟಾರ್ ಹತ್ಯೆ ಆಗಿದ್ದು, ಈ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಠಿಸಿತ್ತು. ಪ್ರಕರಣ ಸಂಬಂಧ ಪೊಲೀಸರು ಹತ್ತು ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಕೇಂದ್ರದ ಎನ್‌ಐಎಗೆ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ರಾಜ್ಯ ಪೊಲೀಸರು ಪ್ರವೀಣ್ ಹತ್ಯೆ ಆರೋಪಿಗಳಾದ ಸವಣೂರು ನಿವಾಸಿ ಜಾಕಿರ್ (29), ಬೆಳ್ಳಾರೆ ನಿವಾಸಿ ಶಫೀಕ್ (27), ಬೆಳ್ಳಾರೆ ಪಳ್ಳಿಮಜಲು ನಿವಾಸಿ ಸದ್ದಾಂ (32), ಬೆಳ್ಳಾರೆ ಪಳ್ಳಿಮಜಲು ನಿವಾಸಿ ಹಾರಿಸ್ (42), ಸುಳ್ಯದ ನಾವೂರು ನಿವಾಸಿ ಹಬೀದ್ (22), ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ (28), ಸುಳ್ಯ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33), ಸುಳ್ಯ ನಿವಾಸಿ ಶಿಹಾಬುದ್ದೀನ್ (33), ಪುತ್ತೂರಿನ ಅಂಕತ್ತಡ್ಕ ನಿವಾಸಿ ರಿಯಾಝ್ (27), ಸುಳ್ಯದ ಎಲಿಮಲೆ ನಿವಾಸಿ ಬಶೀರ್ (28) ಎಂಬ ಆರೋಪಿಗಳನ್ನು ಬಂಧನ ಮಾಡಿತ್ತು.

ಎನ್‌ಐಎ ದಾಳಿ ಖಂಡಿಸಿದ್ದ ಪಿಎಫ್ಐ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪಿಎಫ್ಐ ಮುಖಂಡರ ಮನೆ ಮೇಲೆ ಎನ್ಐಎ ದಾಳಿ ನಡೆಸಿದ್ದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎನ್‌ಐಎ ದಾಳಿಯನ್ನು ಖಂಡಿಸಿದೆ. ಈ ಕುರಿತು ಮಂಗಳೂರಿನಲ್ಲಿ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಮಾತನಾಡಿ ಎನ್‌ಐಎ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು.
ಮಂಗಳೂರಿನ ಪಿಎಫ್ಐ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎ.ಕೆ ಅಶ್ರಫ್,ಪ್ರವೀಣ್ ಅವರು, ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ ನೆಪದಲ್ಲಿ ಬಿಜೆಪಿ ಎನ್‌ಐಎ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪಿಎಫ್‌ಐ ನಾಯಕರು ಎನ್ನುವ ಕಾರಣಕ್ಕೆ ಮುಸ್ಲಿಂ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಿವಮೊಗ್ಗದ ಹರ್ಷ ಮತ್ತು ಪ್ರವೀಣ್ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿದೆ. ಆದರೆ ಇದರಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ಫಾಜಿಲ್ ಪ್ರಕರಣವನ್ನು ಯಾಕೆ ಎನ್ಐಎಗೆ ವಹಿಸಿಲ್ಲ? ಎಂದು ಪ್ರಶ್ನಿಸುವುದರ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.












Click it and Unblock the Notifications