ಮಂಗಳೂರಿನಲ್ಲಿ ಕಾಂತಾರ ನಾಯಕಿ: ಕಟೀಲು ಕ್ಷೇತ್ರಕ್ಕೆ ನಟಿ ಸಪ್ತಮಿ ಗೌಡ ಭೇಟಿ
ಮಂಗಳೂರು, ನವೆಂಬರ್ 16: ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ ಮಂಗಳೂರು ಕ್ಷೇತ್ರ ದರ್ಶನ ಮಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ ಜಿಲ್ಲೆಯ ಅಧಿದೇವತೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಟಿ ಸಪ್ತಮಿ ಗೌಡ ಭೇಟಿ ನೀಡಿದ್ದಾರೆ.
ಸಪ್ತಮಿ ಗೌಡ ಅವರ ಜೊತೆ ನಟ ಸನಿಲ್ ಗುರು, ಸಪ್ತಮಿ ಗೌಡ ತಾಯಿ ಶಾಂತಿ ಕೂಡ ಕಟೀಲಿಗೆ ಭೇಟಿ ನೀಡಿದ್ದು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವಳದ ಅರ್ಚಕರು ಸಪ್ತಮಿ ಗೌಡ ಅವರಿಗೆ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಿದ್ದಾರೆ.
ದೇವರ ದರ್ಶನ ಪಡೆದ ಬಳಿಕ ನಟಿ ಸಪ್ತಮಿ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "ಕಾಂತಾರ ಯಶಸ್ವಿನ ಬಗ್ಗೆ ಹೆಮ್ಮೆ ಇದೆ. ತುಳುನಾಡಿನ ದೈವಾರಾದನೆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ. ಕಾಂತಾರ ಚಿತ್ರದ ನಂತರ ತಿಳಿದಿದೆ. ಬೇರೆ ಬೇರೆ ಸಿನಿಮಾದ ಬಗ್ಗೆ ಮಾತುಕತೆ ನಡೆಯುತ್ತಿದೆ. ತುಳು ಭಾಷೆಯ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಖಂಡಿತ ನಟಿಸುವೆ" ಎಂದು ಹೇಳಿದ್ದಾರೆ.

ಮಂಗಳವಾರ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೇವಸ್ಥಾನ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳಕ್ಕೆ ಸಪ್ತಮಿ ಗೌಡ ಭೇಟಿ ನೀಡಿದ್ದರು. ಆದಿ ಸ್ಥಳದಲ್ಲೇ ಕೆಲ ಸಮಯ ಕಳೆದಿದ್ದ ಸಪ್ತಮಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟಿ ಸಪ್ತಮಿ ಅವರನ್ನು ಕ್ಷೇತ್ರದ ಸಮಿತಿ ಸದಸ್ಯರು ಗೌರವದಿಂದ ಬರಮಾಡಿಕೊಂಡಿದ್ದು, ಕ್ಷೇತ್ರದ ಮಹಿಮೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಪ್ತಮಿ, "ತುಳು ನಾಡಿನ ದೈವಗಳ ಆಶೀರ್ವಾದದಿಂದ ತಮ್ಮ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ದೈವಗಳ ಮೇಲೆ ನನಗೂ ನಂಬಿಕೆ ಇದೆ. ಈ ಕಾರಣದಿಂದಾಗಿಯೇ ಕಾಂತಾರ ಸಿನಿಮಾದ ಮೂಲಕ ನಾಡಿಗೆ ನನ್ನ ಪರಿಚಯವಾದೆ. ಇದಕ್ಕೆಲ್ಲ ದೈವಗಳ ಆಶೀರ್ವಾದವೇ ಕಾರಣ. ಸಿನಿಮಾ ಮಾಡಲುವಾಗ ಅಷ್ಟೇ ಶ್ರದ್ಧೆಯಿಂದ ಕೆಲಸ ಮಾಡಿದೆ. ಈಗಲೂ ಅದೇ ಶ್ರದ್ಧೆಯಿಂದ ಇಲ್ಲಿಗೆ ಬಂದಿರುವೆ" ಎಂದು ಹೇಳಿದ್ದರು.












Click it and Unblock the Notifications