JDS vs Congress: ಮಂಡ್ಯದಲ್ಲಿ ಎಚ್‌ಡಿಕೆಗೆ ಸುಲಭ ಗೆಲುವು ಸಿಗುತ್ತಾ? 'ಕೈ' ಹಿಡಿತಾನ ಮತದಾರ?
ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕಿಂತ ಮೊದಲಿನಿಂದಲೂ ರಾಜ್ಯದಲ್ಲಿ ಭಾರಿ ಕುತೂಹಲ ಕೆರಳಿದ್ದ ಕ್ಷೇತ್ರ ಮಂಡ್ಯ. ಬಿಜೆಪಿಯಿಂದ ಟಿಕೆಟ್ ಸಿಕ್ಕೇ ಸಿಗುತ್ತೇ, ಮಂಡ್ಯ ಬಿಟ್ಟುಕೊಡೋ ಮಾತೇ ಇಲ್ಲ ಎಂದಿದ್ದ ಹಾಲಿ ಸಂಸದೆ ಸುಮಲತಾ ಅವರಿಗೆ ಟಿಕೆಟ್ ಕೈತಪ್ಪಿದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಮಂಡ್ಯ ಕ್ಷೇತ್ರವನ್ನು ಪಡೆದುಕೊಂಡಿತ್ತು.
ಲೋಕಸಭಾ ಚುನಾವಣೆ ಸೀಟು ಹಂಚಿಕೆಯಲ್ಲಿ ಹಾಸನ, ಕೋಲಾರ, ಮಂಡ್ಯ ಕ್ಷೇತ್ರಗಳು ಜೆಡಿಎಸ್ ಪಾಲಾದರೆ, ಉಳಿದ 25 ಕ್ಷೇತ್ರಗಳು ಬಿಜೆಪಿಎ ಪಾಲಾಗಿವೆ. ಮಂಡ್ಯದಿಂದ ಸುಮಲತಾ ಅವರಿಗೆ ಟಿಕೆಟ್ ತಪ್ಪಿಸಿದ ಮೇಲೆ, ಜೆಡಿಎಸ್ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಮತ್ತಷ್ಟು ಕತೂಹಲ ಇತ್ತು.

ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸುಮಲತಾ ವಿರುದ್ಧ ಸೋತಿದ್ದ ನಿಖಿಲ್ ಕುಮಾರಸ್ವಾಮಿ ಅವರೇ ಈ ಬಾರಿ ಕೂಡ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿದ್ದರೂ, ಅಂತಿಮವಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರೇ ಮಂಡ್ಯದಿಂದ ಕಣಕ್ಕಿಳಿಯಲು ನಿರ್ಧರಿಸಿದರು.
ಎಚ್.ಡಿ. ಕುಮಾರಸ್ವಾಮಿ Vs ಸ್ಟಾರ್ ಚಂದ್ರು
ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಅವರನ್ನು ಕಣಕ್ಕಿಳಿಸಿದೆ. ಸ್ಟಾರ್ ಚಂದ್ರು ಸ್ಪರ್ಧೆಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು, ಹಣ ಇರುವ ಅಭ್ಯರ್ಥಿಗೆ ಮಣೆ ಹಾಕಲಾಗಿದೆ ಎನ್ನುವ ಕೂಗು ಕೇಳಿಬಂದಿತ್ತು.
ಮೇಲ್ನೋಟಕ್ಕೆ ಇದು ಎಚ್‌ಡಿಕೆ Vs ಸ್ಟಾರ್ ಚಂದ್ರು ಅವರ ನಡುವಿನ ಸ್ಪರ್ಧೆ ಎನಿಸಿಕೊಂಡರೂ, ಅಸಲಿಯಾಗಿ ಇದು ಎಚ್‌ಡಿಕೆ Vs ಡಿಕೆ ಬ್ರದರ್ಸ್ ನಡುವಿನ ಕಾಳಗವಾಗಿದೆ. ಮಂಡ್ಯದಲ್ಲಿ ಗೆಲ್ಲಲೇಬೇಕೆಂದು ಕಾಂಗ್ರೆಸ್ ಪಣತೊಟ್ಟಿದ್ದು, ಅದಕ್ಕಾಗಿ ರಣತಂತ್ರ ರೂಪಿಸಿದೆ.
ಮಂಡ್ಯದಲ್ಲಿ ಜೆಡಿಎಸ್ ಮುಳುಗಿಸಲು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರು ಪ್ರಯತ್ನ ಮಾಡಿದ್ದರು. ಜೆಡಿಎಸ್ ನಾಯಕ ನಾಲ್ಕು ಬಾರಿ ಎಂಎಲ್‌ಸಿಯಾಗಿದ್ದ ಮರಿತಿಬ್ಬೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು, ಮಾಜಿ ಶಾಸಕ ಅಪ್ಪಾಜಿ ಗೌಡ ಮತ್ತು ಮಂಡ್ಯ ಜಿಲ್ಲೆಯ ಹಲವು ಮುಖಂಡರು ಕೂಡ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು ಇದೆಲ್ಲದೆ ಹಿಂದೆ ಇದ್ದದ್ದು ಡಿಕೆ ಬ್ರದರ್ಸ್.
ಎಚ್‌ಡಿ ಕುಮಾರಸ್ವಾಮಿ ಪ್ರತಿತಂತ್ರ
ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಉತ್ಸಾಹದಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಹೆಚ್‌ಡಿ ಕುಮಾರಸ್ವಾಮಿ ಶಾಕ್ ಕೊಟ್ಟಿದ್ದರು. ಸ್ವತಃ ನಾರಾಯಣಗೌಡರನ್ನು ಭೇಟಿ ಮಾಡಿದ್ದ ಅವರು, ಜೆಡಿಎಸ್‌ನಲ್ಲೇ ಉಳಿಯುವಂತೆ ಮನವೊಲಿಸಿದ್ದರು.
ಮಂಡ್ಯದಲ್ಲಿ ಗೆಲ್ಲೋದ್ಯಾರು?
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 7,03,660 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 5,77,784 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್, ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದವು. ಈ ಬಾರಿ ಕಾಂಗ್ರೆಸ್ ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿದ್ದು, ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ. ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಇದ್ದಾರೆ, ಇನ್ನೊಂದು ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಶಾಸಕರಿದ್ದಾರೆ.
ಮೇಲ್ನೋಟಕ್ಕೆ ಈ ಬಾರಿ ಕಾಂಗ್ರೆಸ್ ಬಲಿಷ್ಠವಾಗಿ ಕಂಡರೂ, ಸ್ವತಃ ಹೆಚ್‌ಡಿ ಕುಮಾರಸ್ವಾಮಿ ಕಣಕ್ಕಿಳಿದಿರುವುದು ಮತ್ತು ಬಿಜೆಪಿ ಬೆಂಬಲ ಸಿಕ್ಕಿರುವುದು ರಾಜಕೀಯ ಚಿತ್ರಣವನ್ನು ಬದಲಾಯಿಸಿದೆ. ಕಾಂಗ್ರೆಸ್ ಗ್ಯಾರಂಟಿಗಳ ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದರೆ, ಹೆಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವನಾಗಿ ರಾಜ್ಯದ ಕೆಲಸ ಮಾಡುವ ಭರವಸೆ ನೀಡಿದ್ದಾರೆ.
ಸುಮಲತಾ ಪ್ರಚಾರ?
ಟಿಕೆಟ್ ಕೈತಪ್ಪಿದ ಬಳಿಕ ಬೆಂಬಲಿಗರ ಜೊತೆ ಚರ್ಚೆ ನಡೆಸಿದ್ದ ಸುಮಲತಾ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರು ಮಂಡ್ಯದಲ್ಲಿ ಹೆಚ್‌ಡಿ ಕುಮಾರಸ್ವಾಮಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರಾ ಎನ್ನುವ ಕುತೂಹಲ ಇದೆ. ಸುಮಲತಾ ಏನಾದರೂ ಮಂಡ್ಯದಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದರೆ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮತ್ತಷ್ಟು ಬಲ ತುಂಬಲಿದೆ.
ಮೇಲ್ನೋಟಕ್ಕೆ ಹೆಚ್.ಡಿ. ಕುಮಾರಸ್ವಾಮಿ ಪರವಾಗಿ ಒಲವಿದೆ ಎನಿಸಿದರೂ, ಕಾಂಗ್ರೆಸ್ ಸುಲಭವಾಗಿ ಸೋಲಲು ತಯಾರಿಲ್ಲ. ಜನ ಅಂತಿಮವಾಗಿ ಯಾರಿಗೆ ಮತ ಹಾಕುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications