ಎರಡು ದಿನದಲ್ಲಿ ನಿರ್ಧಾರ ಪ್ರಕಟಿಸುವೆ : ಸುಮಲತಾ ಅಂಬರೀಶ್
Recommended Video

ಮಂಡ್ಯ, ಮಾರ್ಚ್ 04 : 'ನಾನೀಗ ಜನಾಭಿಪ್ರಾಯವನ್ನು ಸಂಗ್ರಹಣೆ ಮಾಡುತ್ತಿದ್ದೇನೆ. ಇನ್ನು ಎರಡು ದಿನದಲ್ಲಿ ಚುನಾವಣೆಗೆ ಸ್ಪರ್ಧಿಸುವ ಕುರಿತು ನನ್ನ ನಿರ್ಧಾರ ಏನು ಎಂದು ಹೇಳುತ್ತೇನೆ' ಎಂದು ಸುಮಲತಾ ಅಂಬರೀಶ್ ಹೇಳಿದರು.
ಸೋಮವಾರ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಪತ್ರಿಕಾಗೋಷ್ಠಿ ನಡೆಸಿದರು. 'ನಾನು ಕಾಂಗ್ರೆಸ್ ನಾಯಕರನ್ನು ಮಾತ್ರ ಭೇಟಿ ಮಾಡುತ್ತಿದ್ದೇನೆ. ಬಿಜೆಪಿ ಅವರನ್ನು ಭೇಟಿಯಾಗಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
'ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿಲ್ಲ ಎಂದರೆ ಬೇರೆ ಆಯ್ಕೆ ಏನಿದೆ? ಎಂದು ಚಿಂತನೆ ನಡೆಸುತ್ತೇನೆ. ನನಗೆ ಎರಡು ದಿನಗಳ ಕಾಲಾವಕಾಶ ಕೊಡಿ. ನನ್ನ ನಿರ್ಧಾರವನ್ನು ತಿಳಿಸುತ್ತೇನೆ' ಎಂದು ಸುಮಲತಾ ಅಂಬರೀಶ್ ತಿಳಿಸಿದರು.
ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 2019ರ ಲೋಕಸಭಾ ಚುನಾವಣೆ ಕಣಕ್ಕಿಳಿಯಲು ಸುಮಲತಾ ಅಂಬರೀಶ್ ಬಯಸಿದ್ದಾರೆ. ಆದರೆ, ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್ ಸುಮಲತಾ ಅವರ ಸ್ಪರ್ಧೆಗೆ ಇನ್ನೂ ಒಪ್ಪಿಗೆ ಕೊಟ್ಟಿಲ್ಲ....

ಜನಾಭಿಪ್ರಾಯ ಸಂಗ್ರಹ
'ಚುನಾವಣಾ ಕಣಕ್ಕಿಳಿಯುವ ಕುರಿತು ನಾನು ಜನಾಭಿಪ್ರಾಯವನ್ನು ಸಂಗ್ರಹಣೆ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂದೆ ಇಡಬೇಡಿ ಎಂದು ಜನರು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮೊದಲ ಆದ್ಯತೆ ಕೊಡಿ ಎಂದು ಜನರು ಹೇಳುತ್ತಿದ್ದಾರೆ' ಎಂದು ಸುಮಲತಾ ಅಂಬರೀಶ್ ಹೇಳಿದರು.

ಬೇರೆ ಆಯ್ಕೆ ಬಗ್ಗೆ ಆಲೋಚನೆ ಮಾಡುವೆ
'ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿಲ್ಲ ಎಂದರೆ ಬೇರೆ ಆಯ್ಕೆ ಬಗ್ಗೆ ಚಿಂತನೆ ನಡೆಸುತ್ತೇನೆ. ಬಹುಶಃ ಪಕ್ಷೇತರ ಅಭ್ಯರ್ಥಿ ಆಗಬಹುದೇನೋ?. ಜನರ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದೇನೆ. ಎರಡು ದಿನದಲ್ಲಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ' ಎಂದು ಸುಮಲತಾ ಅಂಬರೀಶ್ ಹೇಳಿದರು.

ಚುನಾವಣೆಗೆ ಏಕೆ ಸ್ಪರ್ಧೆ
'ನಾನೇಕೆ ಮಂಡ್ಯಕ್ಕೆ ಬಂದರೆ ಎಂದರೆ ಕಳೆದ ಮೂರು ತಿಂಗಳಿನಿಂದ ಜನರು ಬಂದು ನಿಮ್ಮ ಜೊತೆ ನಾವಿದ್ದೇವೆ ಅಂತ ಹೇಳುತ್ತಿದ್ದಾರೆ. ಈಗಲೂ ಜನರು ಪ್ರೀತಿ, ವಿಶ್ವಾಸವನ್ನು ತೋರಿಸುತ್ತಿದ್ದಾರೆ. ಅಂಬರೀಶ್ ಸ್ಥಾನದಲ್ಲಿ ನೀವು ಇರಿ ಎಂದು ಕೇಳುತ್ತಿದ್ದಾರೆ. ಸೋಲು-ಗೆಲುವು ಇದ್ದೇ ಇರುತ್ತದೆ. ಸೋತರೂ ಚಿಂತೆಯಿಲ್ಲ ಜನರ ಜೊತೆ ಅದೇ ವಿಶ್ವಾಸದಲ್ಲಿ ಇರುತ್ತೇನೆ' ಎಂದು ಸುಮಲತಾ ಅಂಬರೀಶ್ ಹೇಳಿದರು.

ಅಮಿತ್ ಶಾ ಫೋನ್ ಮಾಡಿಲ್ಲ
'ನಾನು ಕಾಂಗ್ರೆಸ್ ಮುಖಂಡರನ್ನು ಮಾತ್ರ ಭೇಟಿಯಾಗುತ್ತಿದ್ದೇನೆ. ಬಿಜೆಪಿ ಅವರನ್ನು ಭೇಟಿ ಮಾಡಿಲ್ಲ. ಬಿಜೆಪಿ ಸೇರುವಂತೆ ಅಮಿತ್ ಶಾ ಅವರು ನನಗೆ ಫೋನ್ ಮಾಡಿಲ್ಲ' ಎಂದು ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.

ಸಾಧನೆಗಳೇ ಮಾತನಾಡಬೇಕು
'ಅವರು ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಅವರ ಸಾಧನೆಗಳೇ ಹೇಳಬೇಕು. ಯಾವುದೇ ವಿಚಾರವನ್ನು ನಾನು ವಿವಾದವಾಗಿ ಮಾಡಲು ಹೋಗುವುದಿಲ್ಲ. ಅಂಬರೀಶ್ ಅವರು ತಾವು ಮಾಡಿದ ಕೆಲಸವನ್ನು ಜಾಹೀರಾತು ಮಾಡಲಿಲ್ಲ' ಎಂದು ಸುಮಲತಾ ಅಂಬರೀಶ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಭೂಮಿಯ ಪತ್ರ ಹಸ್ತಾಂತರ
ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲಿ ಇಂದು ಯೋಧ ಗುರು ಕುಟುಂಬಕ್ಕೆ ಭೂಮಿಯನ್ನು ಹಸ್ತಾಂತರ ಮಾಡಿದರು. 'ಅವರ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕು ಎಂದು ಜಮೀನು ದಾನ ಮಾಡಿದ್ದೇವೆ. ಇದು ನನ್ನ ಅಳಿಲು ಸೇವೆ ಮಾತ್ರ. ಯಾವುದೇ ಷರತ್ತು ಹಾಕದೇ ದಾನವಾಗಿ ನೀಡಲಾಗುತ್ತಿದೆ. ಅವರು ಅದರಲ್ಲಿ ಸ್ಮಾರಕವನ್ನಾದರೂ ಮಾಡಲಿ ಅಥವ ವ್ಯವಸಾಯವನ್ನಾದರೂ ಮಾಡಲಿ' ಎಂದು ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.












Click it and Unblock the Notifications