ಸರ್ವ ಜನಾಂಗದವರು ಪ್ರೀತಿಸುವ ನಾಯಕ ಸಿದ್ದರಾಮಯ್ಯ: ಮಂಡ್ಯದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ
ಮಂಡ್ಯ ಮೇ.19: ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದನ್ನು ಸಂಭ್ರಮಿಸಿದ ವಿವಿಧ ಹಿಂದುಳಿದ ವರ್ಗಗಳ ಮುಖಂಡರು ಮತ್ತು ಅಭಿಮಾನಿಗಳು ಮಂಡ್ಯ ನಗರದ ಜೆ.ಸಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಹೆಚ್.ನಾಗರಾಜು ಮಾತನಾಡಿ, ಸಿದ್ದರಾಮಯ್ಯ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.

ಅವರು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ. ಅವರೊಂದು ಶಕ್ತಿ. ಸರ್ವ ಜನಾಂಗದವರು ಪ್ರೀತಿಸುವ ನಾಯಕರು. ಈ ಹಿಂದೆ ಅವರ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಬಡವರು ಹಾಗೂ ದೀನ ದಲಿತರ ಉದ್ಧಾರಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದರು ಎಂದರು.
ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಕೂಡ ನಮ್ಮ ನಾಯಕರಾಗಿದ್ದು, ಇಬ್ಬರು ಜೋಡೆತ್ತುಗಳಂತೆ ಸರ್ಕಾರನ್ನು ಮುನ್ನಡೆಸಿ ಕಾಂಗ್ರೆಸ್ ಪಕ್ಷದ 5 ಪ್ರಮುಖ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆಯಲಿದೆ ಎಂದರು.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ರಾಜ್ಯದ ಆರ್ಥಿಕ ಸುಸ್ಥಿತಿ, ಸಾಮಾಜಿಕ ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದ ಬಲವರ್ಧನೆಗಾಗಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದು ಆಶಾ ಭಾವನೆಯನ್ನು ಮೂಡಿಸಿದೆ. ಕಾಂಗ್ರೆಸ್ ಜಯಭೇರಿಗೆ ಪ್ರಮುಖ ಕೊಡುಗೆಯನ್ನು ನೀಡಿರುವ ಶೋಷಿತ ಸಮುದಾಯಗಳ ಹಿತರಕ್ಷಣೆಗೆ ಸಿದ್ದರಾಮಯ್ಯ ಮುಂದಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

1999ರ ನಂತರ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ದುಸ್ಥಿತಿಯನ್ನು ಸರಿಪಡಿಸಿ ಪಕ್ಷಕ್ಕೆ ಬಲ ತುಂಬಿ ಎಲ್ಲ ಸಮುದಾಯಗಳನ್ನೂ ರಾಜಕೀಯವಾಗಿ ಸಂಘಟಿಸಿದ ಶಾಸಕರಾದ ಎನ್. ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್. ಸುರೇಶ್ ಮಾತನಾಡಿ, ಸಿದ್ದರಾಮಯ್ಯ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ತೆರಳಲಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿರುವುದರಿಂದ ಎಲ್ಲ ಸಮುದಾಯದ ಜನರಿಗೆ ಶಕ್ತಿ ಬಂದಂತಾಗಿದೆ. ಮುಂದಿನ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications