ಕೆಆರ್‌ಎಸ್ ಸುತ್ತ ಗಣಿಗಾರಿಕೆ ನಿಲ್ಲಿಸುವಂತೆ ಪುಣೆ ಟೆಕ್ನಿಕಲ್ ಟೀಂ ಸೂಚಿಸಿತ್ತು
ಮಂಡ್ಯ, ಜುಲೈ 14: "ಪುಣೆಯಿಂದ ಬಂದಿದ್ದ ಟೆಕ್ನಿಕಲ್ ಟೀಂ ಕೆಆರ್‌ಎಸ್ ಜಲಾಶಯ ಬಳಿ ಗಣಿಗಾರಿಕೆ ಬಂದ್ ಮಾಡಿಸುವಂತೆ ಸೂಚನೆ ನೀಡಿತ್ತು,'' ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹೇಳಿದ್ದಾರೆ.
"ನಾನು ಎರಡು ಬಾರಿ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕನಾಗಿದ್ದೆ. ನಮ್ಮ ಕಾಲದಲ್ಲೂ ಕೆಆರ್‌ಎಸ್ ಅಣೆಕಟ್ಟೆ ಬಗ್ಗೆ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬಂದಿದ್ದವು. ಆಗ ಪುಣೆ ಟೆಕ್ನಿಕಲ್ ಟೀಂ ಸಲಹೆ ನೀಡಿತ್ತು," ಎಂದರು.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಬಂಡಿಸಿದ್ದೇಗೌಡ, "ಪುಣೆ ಟೆಕ್ನಿಕಲ್ ಟೀಂ ಕೆಆರ್‌ಎಸ್ ಅಣೆಕಟ್ಟೆ ಸುತ್ತ ಸರ್ವೆ ಮಾಡಿತ್ತು. 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಬಂದ್ ಮಾಡಿಸಬೇಕು ಎಂದು ಸಹ ಸೂಚಿಸಿತ್ತು. ಅಂದಿನ ಜಿಲ್ಲಾಧಿಕಾರಿಗಳು ಅದರ ಬಗ್ಗೆ ಕ್ರಮ ತೆಗೆದುಕೊಂಡಿದ್ದರು. ನಂತರ ಸರ್ಕಾರ ಬದಲಾವಣೆ ಆಯಿತು, ಆಗ ಅದರ ನಿಲುವು ಸಹ ಬದಲಾಗಿದೆ,'' ಎಂದು ತಿಳಿಸಿದರು.

"ಈಗ ಮತ್ತೆ ಕೆಆರ್‌ಎಸ್ ಎದುರಾಗುವ ಸಮಸ್ಯೆ ಬಗ್ಗೆ ಚರ್ಚೆ ಆರಂಭವಾಗಿದ್ದು, ರಾಜ್ಯ ಸರ್ಕಾರ ಒಂದು ಟೆಕ್ನಿಕಲ್ ಟೀಂ ರಚನೆ ಮಾಡಲಿ. ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಿ."
"ಇದು ಬಿಟ್ಟು ಅನವಶ್ಯಕವಾಗಿ ರಸ್ತೆಯಲ್ಲಿ ನಿಂತು ಜಗಳವಾಡುವುದರಿಂದ ಜನಸಾಮಾನ್ಯರು ನಮ್ಮ ಮೇಲೆ ಇಟ್ಟ ಗೌರವ ಕಡಿಮೆ ಆಗುತ್ತದೆ. ಸಣ್ಣಪುಟ್ಟ ಸಮಸ್ಯೆ ಬಿಟ್ಟರೆ ಕೆಆರ್‍ಎಸ್‌ನಲ್ಲಿ ಬೇರೆ ಸಮಸ್ಯೆಗಳಿಲ್ಲ. ಮುಂದೆ ಇದೇ ಸಮಸ್ಯೆ ದೊಡ್ಡದಾಗಬಾರದು,'' ಎಂದು ರಮೇಶ್ ಬಂಡಿಸಿದ್ದೇಗೌಡ ತಿಳಿ ಹೇಳಿದರು.












Click it and Unblock the Notifications