ಮಂಡ್ಯದಲ್ಲಿ ಮೋದಿ ಸಮಾವೇಶ; ಸಿಎಂಗೆ ಕಾಂಗ್ರೆಸ್ ಪ್ರಶ್ನೆ ಏನು?
ಮಂಡ್ಯದಲ್ಲಿ ನಡೆದ ನರೇಂದ್ರ ಮೋದಿ ಅವರ ಸಮಾವೇಶ ಕುರಿತು ಕರ್ನಾಟಕ ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಪ್ರಶ್ನಿಸಿದೆ
ಬೆಂಗಳೂರು, ಮಾರ್ಚ್ 12; ಭಾರತದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಂಡ್ಯಕ್ಕೆ ಭೇಟಿ ನೀಡಿದ್ದರು. ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆ ಮಾಡಿದ ಬಳಿಕ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಈ ಸಮಾವೇಶದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಪ್ರಶ್ನಿಸಿದೆ. ಮಂಡ್ಯ ಜಿಲ್ಲಾ ಪಂಚಾಯಿತಿ ಇದಕ್ಕಾಗಿ ಹೊರಡಿಸಿದ್ದ ಆದೇಶವೊಂದನ್ನು ಟ್ವೀಟ್ ಮಾಡಿದೆ.
ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, 'ಖಾಲಿ ಕುರ್ಚಿಗಳಿಂದ ನರೇಂದ್ರ ಮೋದಿ ಅವರಿಗೆ ಮುಜುಗರ ಆಗಬಾರದೆಂದು ಬಲವಂತವಾಗಿ ಜನರನ್ನು ಕರೆತರುತ್ತಿರುವಿರಾ ಬಸವರಾಜ ಬೊಮ್ಮಾಯಿ ಅವರೇ ಜನರ ಹಣದಲ್ಲಿ ಪಕ್ಷದ ಮೆರವಣಿಗೆ ಮಾಡಲು ನಾಚಿಕೆ ಎನಿಸುವುದಿಲ್ಲವೇ?. ಬಿಜೆಪಿ ಕರ್ನಾಟಕ ಜನ ಸೇರಿಸಲು ಇಷ್ಟೊಂದು ಪರದಾಡುತ್ತಿರುವುದು ಕರ್ನಾಟಕದಲ್ಲಿ ಮೋದಿ ಮುಖ ಹಳಸಿದೆ ಎಂಬುದನ್ನು ಸೂಚಿಸುತ್ತದೆ' ಎಂದು ದೂರಿದೆ.

ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ನಾಗಮಂಗಲದ ಫೈಟರ್ ರವಿ ಜಾಹೀರಾತನ್ನು ಉಲ್ಲೇಖಿಸಿ, 'ಮೋದಿಯವರೆಂದರೆ ಕಳ್ಳರಿಗೆ, ಸುಳ್ಳರಿಗೆ, ವಂಚಕರಿಗೆ, ಭ್ರಷ್ಟರಿಗೆ, ರೌಡಿಗಳಿಗೆ ಭಲೇ ಅಚ್ಚುಮೆಚ್ಚು! #BJPRowdyMorcha ವತಿಯಿಂದ ಮೋದಿಗೆ ಭಾರಿ ಸ್ವಾಗತವಿದೆ! ನರೇಂದ್ರ ಮೋದಿ ಅವರೇ ಬಿಜೆಪಿ ಕರ್ನಾಟಕ ಪಕ್ಷದ ರೌಡಿ ಮೋರ್ಚಾ ಯಾವಾಗ ಉದ್ಘಾಟಿಸುವಿರಿ? ಯಾವಾಗ ಮಚ್ಚು, ಲಾಂಗುಗಳನ್ನು ಪಕ್ಷದ ಚಿಹ್ನೆಯಾಗಿ ಪಡೆಯುವಿರಿ?' ಎಂದು ಕೇಳಿದೆ.
ಮಂಡ್ಯ ಜಿಲ್ಲಾ ಪಂಚಾಯಿತಿ ಪತ್ರ; ಮಂಡ್ಯ ಜಿಲ್ಲಾ ಪಂಚಾಯತಿ ಇಂದಿನ ಮೋದಿ ಕಾರ್ಯಕ್ರಮದ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿತ್ತು. ದಿನಾಂಕ 12-03-2023 ರಂದು ನಡೆಯುವ ಸನ್ಮಾನ್ಯ ಪ್ರಧಾನ ಮಂತ್ರಿಗಳ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆತರುವ ಬಗ್ಗೆಎಂಬ ವಿಚಾರವನ್ನು ಇದು ಒಳಗೊಂಡಿತ್ತು.

ಸನ್ಮಾನ್ಯ ಪ್ರಧಾನ ಮಂತ್ರಿಗಳು, ಭಾರತ ಸರ್ಕಾರರವರು ಮಂಡ್ಯ ಜಿಲ್ಲೆಗೆ ದಿನಾಂಕ 12-03-2023 ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೇಂದ್ರ ಸರ್ಕಾರದ/ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳನ್ನು ಸಮಾರಂಭ ನಡೆಯುವ ಸ್ಥಳಕ್ಕೆ ಕರೆತರಲು ತಮ್ಮ ತಮ್ಮ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನಕ್ಕೆ ಕೆ. ಎಸ್. ಆರ್. ಟಿ. ಸಿ., ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಸಿದ್ದು, ನಿಮ್ಮ ವ್ಯಾಪ್ತಿಯ ಫಲಾನುಭವಿಗಳನ್ನು ಬೆಳಗ್ಗೆ 8.00 ಗಂಟೆಗೆ ಸಮಾರಂಭಕ್ಕೆ ಕರೆದುಕೊಂಡು ಹೋಗಿ, ಸಮಾರಂಭ ಮುಕ್ತಾಯದ ನಂತರ ಫಲಾನುಭವಿಗಳನ್ನು ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲಿ ಇಡಲು ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲು ಎಲ್ಲಾ ಗ್ರಾಮ ಪಂಚಾಯತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು ಹಾಗೂ ಈ ಸಂಬಂಧಪಟ್ಟ ಛಾಯಾಚಿತ್ರಗಳನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಾಕಲು ಸೂಚಿಸುತ್ತಾ, ಮಾನ್ಯ ಜಿಲ್ಲಾಧಿಕಾರಿಗಳ ಪತ್ರವನ್ನು ಈ ಕೂಡ ಲಗತ್ತಿಸಿದೆ ಎಂದು ಸುತ್ತೋಲೆ ಹೇಳಿತ್ತು.
ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್, 'ನೆರೆ ಬಂದಾಗ ಬರಲಿಲ್ಲ, ಬರ ಬಂದಾಗ ಬರಲಿಲ್ಲ, ಕರ್ನಾಟಕಕ್ಕೆ ಆಕ್ಸಿಜನ್ ಕೊಡಲಿಲ್ಲ, ವ್ಯಾಕ್ಸಿನ್ ನೀಡಲಿಲ್ಲ, GST ಪಾಲು ಸಿಗಲಿಲ್ಲ. ಯಡಿಯೂರಪ್ಪ ಅವರು ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಭೇಟಿಯಾಗಿರಲಿಲ್ಲ. ಚುನಾವಣೆಗಾಗಿ ಹಲ್ಲು ಕಿಸಿದು, ಕೈಬೀಸಿ ಹೋಗಲು ಬರುವ ನರೇಂದ್ರ ಮೋದಿ ಕರ್ನಾಟಕಕ್ಕೆ ಮಾಡಿದ್ದು ಮಹಾ ವಂಚನೆ' ಎಂದು ಕಾಂಗ್ರೆಸ್ ಟೀಕಿಸಿದೆ.
'ಭ್ರಷ್ಟಾಚಾರಕ್ಕೆ ಬಿಜೆಪಿಯೇ ಭರವಸೆ, ಭ್ರಷ್ಟರಿಗೆ ಮೋದಿಯೇ ಭರವಸೆ"! 40% ಕಮಿಷನ್ ಲೂಟಿಯ ಬಗ್ಗೆ ಹಲವು ಪತ್ರಗಳನ್ನು ಬರೆದರೂ ಇತ್ತ ಸುಳಿಯದ ನರೇಂದ್ರ ಮೋದಿ
ಚುನಾವಣೆಗಾಗಿ ವಾರಕ್ಕೊಮ್ಮೆ ಕರ್ನಾಟಕದಲ್ಲಿ ಚಾಪೆ ಹಾಸಿ ಮಲಾಗುತ್ತಿರುವುದು ಅವರ ಆತ್ಮವಂಚಕತನಕ್ಕೆ ಸಾಕ್ಷಿ. PSI ಹಗರಣದಿಂದ ನೊಂದ ಯುವಕರ ಬಗ್ಗೆ ಮೋದಿ ಮಾತಾಡುವರೇ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.












Click it and Unblock the Notifications