Bengaluru-Mysuru Expressway: ಹೆದ್ದಾರಿ ಕಾಮಗಾರಿಯಲ್ಲೂ ಕಳಪೆ ಬುದ್ಧಿ ತೋರಿಸಿದ BJP: ಚಲುವರಾಯಸ್ವಾಮಿ
ಮಂಡ್ಯ, ಜೂನ್, 11: ಬೆಂಗಳೂರು-ಮೈಸೂರು ಹೆದ್ದಾರಿ ಕಾಮಾಗಾರಿ ಕಳಪೆಯಾಗಿದ್ದು, ಇಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಗತ್ಯವಾಗಿರುವ ಯಾವುದೇ ಸೌಲಭ್ಯವನ್ನೂ ಸಹ ಕಲ್ಪಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಆರೋಪಿಸಿದರು. ಅಲ್ಲದೆ ಹೆದ್ದಾರಿ ಕಾಮಗಾರಿಯಲ್ಲೂ ಬಿಜೆಪಿ ಕಳಪೆ ಬುದ್ಧಿ ತೋರಿಸಿದೆ ಎಂದು ತಿವಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಹಲವಾರು ರಾಷ್ಟ್ರೀಯ ಹೆದ್ದಾರಿಗಳನ್ನು ನೋಡಿದ್ದೇನೆ. ಆದರೆ ಇಷ್ಟೊಂದು ಕಳಪೆ ಆಗಿರುವುದು ಯಾವುದೂ ಇಲ್ಲ. ಈ ರಸ್ತೆಯಲ್ಲಿ ವೇಗವಾಗಿ ಸಂಚರಿಸುವುದೇ ದುಸ್ತರವಾಗಿದೆ ಎಂದು ಹೇಳಿದರು.

ಹೆದ್ದಾರಿಯಲ್ಲಿ ಎಷ್ಟು ಕಿಲೋ ಮೀಟರ್ ವೇಗದಲ್ಲಿ ಸಾಗಬೇಕು. ಅದರೆ ಇಲ್ಲಿ ಮಾರ್ಗಸೂಚಿಗಳನ್ನೂ ಅಳವಡಿಸಿಲ್ಲ. ಎಕ್ಸ್‌ಪ್ರೆಸ್ ಕಾರಿಡಾರ್ ಎನ್ನುವ ಹೆಸರಿಗೆ ಈ ರಸ್ತೆ ಕಳಂಕಪ್ರಾಯವಾಗಿದೆ. ಬೆಂಗಳೂರು-ಮೈಸೂರು ನಡುವೆ ಎಲ್ಲೂ ಶೌಚಾಲಯಗಳನ್ನು ನಿರ್ಮಿಸಿಲ್ಲ, ಆ್ಯಂಬುಲೆನ್ಸ್ ಸೌಲಭ್ಯ ಕಲ್ಪಿಸಿಲ್ಲ. ಒಟ್ಟಾರೆ ಸೌಲಭ್ಯಗಳಿಲ್ಲದ ಕೇವಲ ಹೆದ್ದಾರಿಯಾಗಿಯೇ ಪರಿವರ್ತನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭೂಸ್ವಾಧೀನದಲ್ಲೂ ಅವ್ಯವಹಾರ
ಭೂಸ್ವಾಧೀನ ಪ್ರಕ್ರಿಯೆಲ್ಲಿ ಸಾಕಷ್ಟು ಅವ್ಯವಹಾರಗಳು ಆಗಿರುವ ಬಗ್ಗೆ ದೂರುಗಳು ಬಂದಿವೆ. ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ದೂರುಗಳು ಬರುತ್ತಲೇ ಇವೆ. ಕೆಳ ಸೇತುವೆಗಳೂ ಸಹ ಸಮಸ್ಯೆಗಳ ಆಗರವಾಗಿವೆ. ಹೆದ್ದಾರಿಯಲ್ಲಿ ಓಡಾಡುವುದು ಎಷ್ಟು ಆತಂಕಕಾರಿಯೋ ಅಷ್ಟೇ ಪ್ರಮಾಣದಲ್ಲಿ ಕೆಳ ಸೇತುವೆ ಮತ್ತು ಸರ್ವೀಸ್ ರಸ್ತೆಗಳಲ್ಲೂ ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ
ರಸ್ತೆ ಕಾಮಗಾರಿ ಪೂರ್ಣವಾಗದಿದ್ದರೂ ಸಹ ಕೇವಲ ರಾಜಕೀಯಕ್ಕಾಗಿ ಈ ರಸ್ತೆಯನ್ನು ಲೋಕಾರ್ಪಣೆ ಮಾಡಲಾಯಿತು. ನಮ್ಮ ಸಂಸದರಾದ ಡಿ.ಕೆ.ಸುರೇಶ್ ಅವರು ಪ್ರಾರಂಭದಲ್ಲೇ ಇದನ್ನು ವಿರೋಧಿಸಿದ್ದರು. ಆದರೂ ಆಳುವ ಸರ್ಕಾರ ರಸ್ತೆ ಲೋಕಾರ್ಪಣೆ ಮಾಡಿತು. ಈ ರಸ್ತೆಯ ಎಲ್ಲಾ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮವಾಗಬೇಕು. ಅದಕ್ಕೆ ತಗುಲಿರುವ ಹಣವನ್ನು ಅವರಿಂದಲೇ ಕಟ್ಟಿಸುವಂತಹ ಪ್ರಕ್ರಿಯೆ ಆಗಬೇಕು ಎಂದರು.
ಕಾರ್ಖಾನೆ ಪುನಶ್ಚೇತನಕ್ಕೆ ಹಣ ಬಿಡುಗಡೆ
ಜನತಾದಳ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೈಶುಗರ್ ಕಾರ್ಖಾನೆ ಸ್ಥಗಿತಗೊಂಡಿತ್ತು. ಪುನಶ್ಚೇತನಕ್ಕೆ ಹಣ ನೀಡಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕುಮಾರಸ್ವಾಮಿ ಏನೂ ಮಾಡಲಿಲ್ಲ, ಯಡಿಯೂರಪ್ಪ ಖಾಸಗಿಯವರಿಗೆ ನೀಡುವ ಯತ್ನ ಮಾಡಿದರು. ಬೊಮ್ಮಾಯಿ ಅವರು ಪರೋಕ್ಷವಾಗಿ ಗುತ್ತಿಗೆ ನೀಡಿದರು. ಇದರಿಂದಾಗಿ ಈ ಭಾಗದ ರೈತರ ಕಬ್ಬು ಅರೆಯಲಾಗದ ಪರಿಸ್ಥಿತಿಯಲ್ಲಿ ಕಾರ್ಖಾನೆ ಇತ್ತು ಎಂದು ವಿವರಿಸಿದರು.
ಈ ಹಿಂದೆ ಮೈಶುಗರ್ ಆರಂಭಿಸುವುದಾಗಿ ನಾನು ಮತ್ತು ಸಿದ್ದರಾಮಯ್ಯ ಹೇಳಿದ್ದೆವು. ಅದರಂತೆಯೇ ಮೊದಲ ಸಂಪುಟ ಸಭೆಯಲ್ಲೇ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದೇವೆ. ಹೊಸ ಕಾರ್ಖಾನೆ ನಿರ್ಮಾಣ ಮಾಡಲು ಅಧಿಕಾರಿಗಳಿಂದ ವರದಿ ಕೇಳಿದ್ದೇವೆ. ಶೀಘ್ರ ಈ ಕಾರ್ಯ ಚಾಲನೆ ಆಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಳಿವೆ. ಹೆಚ್ಚು ಕಬ್ಬು ಬೆಳೆಯುವ ರೈತರು ಜಿಲ್ಲೆಯಲ್ಲಿದ್ದಾರೆ. ನಿಗಧಿತ ಅವಧಿಯೊಳಗೆ ಕಬ್ಬು ಅರೆದು ರೈತರಿಗೆ ಹಣ ಕೊಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ. ಮಂಜುನಾಥ್ ರಾಜ್ಯ ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ್, ಸೋಮಶೇಖರ್ ಕೆರಗೋಡು, ನಿರ್ದೇಶಕ ಸಿ.ಎನ್. ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಬಿ.ಪಿ. ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications