ಮಿಮ್ಸ್ ಪಕ್ಕದಲ್ಲಿರುವ ಸ್ಲಂ ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರ ಸೂಚನೆ
ಮಂಡ್ಯ, ಡಿಸೆಂಬರ್ 15: ಮಿಮ್ಸ್ ಪಕ್ಕದಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಸ್ಲಂನ್ನು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಖಡಕ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕಟ್ಟಡ ಕಟ್ಟಲು ಬಂದವರು ಅನಧಿಕೃತವಾಗಿ ಸ್ಲಂ ಜಾಗವನ್ನು ಆಕ್ರಮಿಸಿಕೊಂಡು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಕೂಡಲೇ ಅವರನ್ನು ಬೇರೆಡೆಗೆ ವರ್ಗಾಯಿಸಿದರೆ ಮಿಮ್ಸ್‌ಗೆ ಅವಶ್ಯಕತೆ ಇರುವ ಕಟ್ಟಡಗಳನ್ನು ಕಟ್ಟಬಹುದು ಎಂದರು.

ಮಿಮ್ಸ್ ಪಕ್ಕದ ಸ್ಲಂ ಖಾಲಿ ಮಾಡಿಸುವಂತೆ ಮನವಿ
ಮಿಮ್ಸ್‌ಗೆ ಇನ್ನೂ ಕಟ್ಟಡಗಳು, ವೈದ್ಯರು ಮತ್ತು ಶುಶ್ರೂಷಕಿಯರ ಅವಶ್ಯಕತೆ ಇದೆ ಸ್ಲಂ ಜನತೆಗೆ ಈಗಾಗಲೇ ಕೆರೆಯಂಗಳದಲ್ಲಿ ಕಟ್ಟಡಗಳನ್ನು ಕಟ್ಟಲಾಗಿದ್ದು, ಅವರನ್ನು ಕಳುಹಿಸಿದರೆ ಮಿಮ್ಸ್‌ಗೆ ಅವಶ್ಯಕತೆ ಇರುವ ಕಟ್ಟಡಗಳನ್ನು ಕಟ್ಟಿಕೊಳ್ಳಬಹುದು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ತೆರಳಿ ಅಲ್ಲಿ ವಾಸಿಸುತ್ತಿರುವ ಜನತೆಯ ಮನವೊಲಿಸಿ ಅವರಿಗೆ ನೀಡಿರುವ ಮನೆಗಳಿಗೆ ಕಳುಹಿಸಬೇಕೆಂದು ಮಿಮ್ಸ್ ನಿರ್ದೇಶಕ ಬಿ.ಜೆ. ಮಹೇಂದ್ರ ಮನವಿ ಮಾಡಿಕೊಂಡರು.

ಮಿಮ್ಸ್ ಸಮಸ್ಯೆಗಳ ಬಗ್ಗೆ ಪಟ್ಟಿ ಕೊಡುವಂತೆ ಸೂಚನೆ
ಮಿಮ್ಸ್ ನಿರ್ದೇಶಕ ಬಿ.ಜೆ. ಮಹೇಂದ್ರ ಅವರು ಕೊಠಡಿಗಳ ಕೊರತೆ ಇದೆ. 450 ರಿಂದ 800 ಬೆಡ್‌ಗಳಾಗಿದ್ದು, ಜಾಗ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡ, ವೈದ್ಯರು, ನರ್ಸ್ ಕೊರತೆ ಇದೆ ಎಂದು ಸಭೆಯಲ್ಲಿ ತಿಳಿಸಿದರು. ಇದನ್ನು ಕೇಳುತ್ತಿದ್ದಂತೆ ಕೋಪಗೊಂಡ ಯುವ ಸಬಲೀಕರಣ ಸಚಿವ ಕೆ.ಸಿ.ನಾರಾಯಣಗೌಡ, ನೀವು ಬಂದು ಎಷ್ಟು ದಿನವಾಯಿತು..? ಮಿಮ್ಸ್ ಸಮಸ್ಯೆಗಳ ಬಗ್ಗೆ ಒಂದು ದಿನವಾದರೂ ಜಿಲ್ಲಾ ಉಸ್ತುವಾರಿ ಸಚಿವರಿಗಾಗಲೀ, ನನಗಾಗಲೀ ತಿಳಿಸಿದ್ದೀರಾ..? ನೀವು ಸಚಿವರನ್ನು ಭೇಟಿಯಾಗಿದ್ದೀರಾ..? ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವ ಕೆ.ಗೋಪಾಲಯ್ಯ ಅವರು, ಮಿಮ್ಸ್ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಸಂಜೆಯೊಳಗೆ ಕೊಡಿ ಎಂದು ಮಿಮ್ಸ್ ನಿರ್ದೇಶಕ ಬಿ.ಜೆ. ಮಹೇಂದ್ರಗೆ ತಿಳಿಸಿದರು.

ಅಧಿಕಾರಿಗಳ ವಿರುದ್ಧ ಸಚಿವರು ಗರಂ
ಮಳೆಯಿಂದ ಸರ್ಕಾರಿ ಶಾಲೆಗಳು ಹಾನಿಯಾಗಿದ್ದು, ಈ ಸಂಬಂಧ ಪಿಡಬ್ಲ್ಯೂಡಿಗೆ ದುರಸ್ತಿ ಮಾಡಲು ನೀಡಲಾಗಿದೆ. ಆದರೆ, ಇದುವರೆಗೂ ದುರಸ್ತಿ ಮಾಡಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು. ಇದರಿಂದ ಕೋಪಗೊಂಡ ಇಬ್ಬರು ಸಚಿವರು, ಏಕೆ ಶಾಲೆಗಳನ್ನು ದುರಸ್ತಿ ಮಾಡಲು ಮೀನಮೇಷ ಎಣಿಸುತ್ತಿದ್ದೀರಿ..? ಕೂಡಲೇ ಕೆಲಸ ಮುಗಿಸಿ, ಇಲ್ಲವೇ ಜಾಗ ಖಾಲಿ ಮಾಡಿ ಎಂದು ಆದೇಶಿಸಿದರು.
ಇದಕ್ಕೆ ಉತ್ತರಿಸಿದ ಪಿಡಬ್ಲ್ಯೂಡಿ ಅಧಿಕಾರಿ, ಸರ್ಕಾರದಿಂದ 14 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, 7 ತಾಲೂಕುಗಳಿಗೆ ತಲಾ 2 ಕೋಟಿ ರೂ.ಗಳನ್ನು ಹಂಚಲಾಗಿದೆ. ಶೀಘ್ರದಲ್ಲೇ ಕೆಲಸ ಪ್ರಾರಂಭಿಸಿ ಇನ್ನು 15 ದಿನಗಳಲ್ಲಿ ದುರಸ್ತಿ ಕಾರ್ಯ ಮುಗಿಸುತ್ತೇವೆ ಎಂದು ಉತ್ತರಿಸಿದರು.

ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿ
ನೆರೆ ಹಾವಳಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಶೇ. 99ರಷ್ಟು ಪರಿಹಾರ ನೀಡಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಭತ್ತಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್. ಅಶೋಕ್ ಸಭೆಯಲ್ಲಿ ವಿವರಿಸಿದರು. ಈ ಸಂದರ್ಭ ಮಾತನಾಡಿದ ಸಚಿವ ಕೆ.ಸಿ. ನಾರಾಯಣಗೌಡ ಅವರು ಎಲ್ಲೆಲ್ಲಿ ಹುರುಳಿ ಬಿತ್ತನೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದರು.
ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಎಎಸ್ಪಿ ವೇಣುಗೋಪಾಲ್, ಡಿಎ್ಒ ರುದ್ರನ್ ಭಾಗಿಯಾಗಿದ್ದರು.












Click it and Unblock the Notifications