ರೈತರಿಗೆ ಬಿಗ್ ಶಾಕ್: ಹಾಲಿನ ದರ ಇಳಿಸಿದ ಮನ್ಮುಲ್, ಪಶು ಆಹಾರದ ಬೆಲೆ ಏರಿಕೆ
ಮಂಡ್ಯ, ಡಿಸೆಂಬರ್ 26: ಈ ಬಾರಿ ಮಳೆ ಕೈಕೊಟ್ಟ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎದುರಾದ ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯ ಜಿಲ್ಲೆಯ ರೈತರು ಸಹ ಬರಗಾಲದ ಸಂಕಷ್ಟದಿಂದ ಪರದಾಡುತ್ತಿದ್ದು, ಸರ್ಕಾರದ ನೆರವು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ಮಧ್ಯೆಯೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರಿಗೆ ಬಿಗ್ ಶಾಕ್ ಕೊಟ್ಟಿದೆ.
ಬರದ ನಡುವೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರಿಂದ ಖರೀದಿಸುವ ಹಾಲಿನ ದರ ಇಳಿಕೆ ಮಾಡಿ, ಪಶು ಆಹಾರದ ಬೆಲೆಯನ್ನು ಏರಿಕೆ ಮಾಡಿದೆ. ತೀವ್ರ ಬರಗಾಲದ ಕಷ್ಟದ ನಡುವೆ ಮನ್ ಮುಲ್ ರೈತರಿಂದ ಖರೀದಿಸುವ ಹಾಲಿನ ದರ ಏಕಾಏಕಿ 1.50 ರೂಪಾಯಿ ಕಡಿತ ಮಾಡಿದೆ.

ಸದ್ಯ ಪ್ರತೀ ಲೀಟರ್ ಹಾಲಿಗೆ 1.50 ರೂಪಾಯಿ ಇಳಿಸಿದ್ದು, ಮತ್ತೊಂದೆಡೆ ಕೆಎಂಎಫ್ ಪಶು ಆಹಾರದ ಬೆಲೆ ಚೀಲಕ್ಕೆ 50 ರೂಪಾಯಿ ಏರಿಕೆ ಮಾಡಿದೆ. ಡಿಸೆಂಬರ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಪರಿಷ್ಕೃತ ದರದ ಬಗ್ಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಹಾಲು ಉತ್ಪಾದಕರಿಂದ ಪಡೆಯುವ ಹಾಲಿಗೆ ಪ್ರತೀ ಲೀಟರ್‌ಗೆ 33.50 ರೂಪಾಯಿ ನೀಡಲಾಗುತ್ತಿತ್ತು. ಸದ್ಯ 1.50 ರೂಪಾಯಿ ಕಡಿತಗೊಳಿಸಲಾಗಿದ್ದು, ಸದ್ಯ ಹಾಲಿನ ದರ 32 ರೂಪಾಯಿ ಆಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈ ನಡುವೆ ಹಾಲಿನ ದರ ಕಡಿತಗೊಳಿಸಿರುವುದಕ್ಕೆ ಮಂಡ್ಯ ರೈತ ಸಂಘ ಕಿಡಿಕಾರಿದ್ದು, ಕೂಡಲೇ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications